‘ಹಿಂದು’ ಹೆಮ್ಮೆ ಮೂಡಿಸಿದ್ದು ಆರ್‌ಎಸ್‌ಎಸ್

ಮುಧೋಳ : ಹಿಂದುಗಳು ತಮ್ಮ ಪರಂಪರೆ ಮರೆತು ಸ್ವ ಹಿತಾಸಕ್ತಿ, ವೈಮನಸ್ಸು, ಅಸೂಯೆ ತಾಂಡವವಾಡುತ್ತಿದ್ದ ಕಾಲ ಘಟ್ಟದಲ್ಲಿ ಸಮಾಜ ಸೇವಕ ಕೇಶವ ಬಲಿರಾಮ್ ಹೆಡಗೆವಾರ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಆರಂಭಿಸಿದರು ಎಂದು ಆರ್‌ಎಸ್‌ಎಸ್ ಪ್ರಾಂತ ಸಹ ಸೇವಾ ಪ್ರಮುಖ ದುರ್ಗಣ್ಣ ಹೇಳಿದರು.

ನಗರದ ಆರ್‌ಎಂಜಿ ಕಾಲೇಜು ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆರ್‌ಎಸ್‌ಎಸ್ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಘದ ಕಾರ್ಯಕರ್ತರು ಮಾಡುವುದನ್ನೇ ಆಡುತ್ತಾರೆ. ಆಡಿದರೆ ಮಾಡಿಯೇ ತೋರಿಸುತ್ತಾರೆ ಎಂಬುದನ್ನು ರುಜುವಾತು ಮಾಡಿದ್ದಾರೆ. ನಾನು ಹಿಂದು ಎಂದು ಹೇಳಲು ಇದ್ದ ಹಿಂಜರಿಕೆಯನ್ನು ದೂರ ಮಾಡಿದ್ದು ಸಂಘದ ತಾಕತ್ತು. ಇಂದು ದೇಶದ ಮುಂದಿರುವ ರಾಷ್ಟ್ರದ್ರೋಹ, ಭಯೋತ್ಪಾದನೆ, ನಕ್ಸಲಿಸಂ ಎಲ್ಲವನ್ನು ಹತ್ತಿಕ್ಕಲು ಸಾರ್ವಜನಿಕರು ಕೈ ಜೋಡಿಸಿದರೆ ಕೆಲಸ ತೀವ್ರವಾಗುತ್ತದೆ ಎಂದು ಹೇಳಿದರು.

ಹೋಟೆಲ್ ಉದ್ಯಮಿ ವೆಂಕಟೇಶ ಗಾಣಿಗ ಮಾತನಾಡಿ, ಆರ್‌ಎಸ್‌ಎಸ್ ಪ್ರಕೃತಿ ವಿಕೋಪ ಮತ್ತಿತರ ಘಟನೆಗಳ ವೇಳೆ ಗಣನೀಯ ಕಾರ್ಯ ಮಾಡಿ ದೇಶವನ್ನು ರಕ್ಷಿಸುವ ಕೆಲಸ ನಿರಂತರವಾಗಿ ಮಾಡುತ್ತ ಬಂದಿದೆ ಎಂದರು.
ಪ್ರಾಂತ ಸಂಚಾಲಕ ಸಾಬಣ್ಣ ತಳವಾರ ವರದಿ ವಾಚಿಸಿದರು. ಶಿಕ್ಷಾರ್ಥಿಗಳು ಸಮಾರೋಪದಲ್ಲಿ ಪ್ರದರ್ಶನ ನೀಡಿದರು. ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘ ಸಂಚಾಲಕ ವಿ.ನಾಗರಾಜ್, ಪ್ರಾಂತ ಸಂಚಾಲಕ ಖಗೇಶನ ಪಟ್ಟಣ, ವರ್ಗಾಧಿಕಾರಿಗಳಾದ ಸಾಬಣ್ಣ ತಳವಾರ, ಅಶೋಕ ತುಂಗಳ, ವೆಂಕಟೇಶ ಗಾಣಿಗ, ರಾಘವೇಂದ್ರ ಕಾಗವಾಡ, ಕೃಷ್ಣಾನಂದ ಕಾಮತ್ ಇದ್ದರು.

ಏ. 28ರಂದು ಆರಂಭಗೊಂಡ ಸಂಘ ಶಿಕ್ಷಾ ವರ್ಗದಲ್ಲಿ 18 ಜಿಲ್ಲೆಗಳ 138 ಶಿಕ್ಷಾರ್ಥಿಗಳು ಪಾಲ್ಗೊಂಡಿದ್ದರು. ಚರ್ಚೆ, ಬೌದ್ಧಿಕ ವರ್ಗ, ಬೈಠಕ್, ರಾಷ್ಟ್ರೀಯ ವಿಚಾರ, ವ್ಯಾಯಮ, ದಂಡ, ನಿಯುದ್ಧ, ಯೋಗಾಸನ, ಪದವಿನ್ಯಾಸ, ಸಮತಾ, ಸಂಚಲನ, ಹಿಂದು ಧರ್ಮ, ಸಂಸ್ಕೃತಿ ಹಾಗೂ ಸಂಘಟನೆ ಬಗ್ಗೆಯ ಸೂಕ್ಷ್ಮ ವಿಚಾರಗಳನ್ನು ಶಿಕ್ಷಾರ್ಥಿಗಳು ಪಡೆದರು.

Leave a Reply

Your email address will not be published. Required fields are marked *