ಉರ್ದು ಶಾಲೆ ಶುಚಿಗೊಳಿಸಿದ ಆರ್‌ಎಸ್‌ಎಸ್

ವೆಂಕಟೇಶ ಗುಡೆಪ್ಪನವರ

ಮುಧೋಳ: ಪ್ರಖರ ಹಿಂದುತ್ವವಾದಿ ಎಂದೇ ಬಿಂಬಿತವಾಗಿರುವ ರಾಷ್ಟ್ರೀಯ ಸ್ವಯಂಸೇವಾ ಸಂಘದ (ಆರ್‌ಆರ್‌ಎಸ್) ಕಾರ್ಯಕರ್ತರು ಮುಧೋಳ ನಗರದಲ್ಲಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯನ್ನು ಸ್ವಚ್ಛಗೊಳಿಸುವ ಮೂಲಕ ಏಕತೆಯ ಸಂದೇಶ ಸಾರಿದರು.

ಘಟಪ್ರಭಾ ನದಿ ಪ್ರವಾಹ ವೇಳೆ ಶಾಲೆ ಸಂಪೂರ್ಣ ಜಲಾವೃತವಾಗಿತ್ತು. ಹೀಗಾಗಿ ಶಾಲೆಯಲ್ಲಿನ ಎಲ್ಲ ಕೊಠಡಿ, ಆವರಣದಲ್ಲಿ ಕೆಸರು, ತ್ಯಾಜ್ಯ, ಹುಳುಹುಪ್ಪಡಿಗಳು ತುಂಬಿಕೊಂಡಿದ್ದವು. ಮಂಗಳವಾರ ಬೆಳಗ್ಗೆ 5 ಗಂಟೆಗೆ ಶಾಲೆ ಆವರಣಕ್ಕೆ ಆಗಮಿಸಿದ ಕಾರ್ಯಕರ್ತರು ಸ್ವಚ್ಛತೆ ಕಾರ್ಯ ಕೈಗೊಂಡರು.

ಕೆಸರು ತುಂಬಿದ್ದ ಕೊಠಡಿಗಳಿಗೆ ನೀರು ಎರಚಿ ಪೊರಕೆಯಿಂದ ಗೂಡಿಸಿ ನೀರು ಹೊರಚೆಲ್ಲಿದರು. ಕಸ ತೆರವುಗೊಳಿಸಿ ಶಾಲೆ ನಳನಳಿಸುವಂತೆ ಮಾಡಿದರು. ಶಾಲೆ ಆರಂಭವಾಗುವ ಸಮಯಕ್ಕೆ ವಿದ್ಯಾರ್ಥಿಗಳು ಕೊಠಡಿಯಲ್ಲಿ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಿಕೊಟ್ಟರು. ಒಂದು ಪಾಕೆಟ್ ಬಿಸ್ಕತ್ ನೀಡಿ ಪ್ರಚಾರ ಪಡೆಯುವವರೇ ಹೆಚ್ಚಿರುವಾಗ ಸದಾಕಾಲ ದೇಶದ ಪ್ರಗತಿ, ಏಕತೆಗಾಗಿ ನಿಸ್ವಾರ್ಥ ಸೇವೆ ಮಾಡುವ ಆರ್‌ಎಸ್‌ಎಸ್‌ನ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು. ಇಲ್ಲಿ ಯಾವುದೇ ಧರ್ಮಕ್ಕಿಂತ ಮಾನವೀಯತೆ ಮುಖ್ಯ ಎಂಬುದು ಸಾಬೀತಾಯಿತು.

ಮೇವು ಪೂರೈಕೆ
ಗುಲಗಾಲಜಂಬಗಿ, ಜಂಬಗಿ ಕೆ.ಡಿ., ರೂಗಿ, ನಂದಗಾಂವ ಸಹಿತ ಹಲವಾರು ಗ್ರಾಮಗಳಲ್ಲಿ ಅಪಾಯಕ್ಕೆ ಸಿಲುಕಿದ್ದ ಜನರನ್ನು ದಡಕ್ಕೆ ಸಾಗಿಸುವ ಜತೆಗೆ ಅವರಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಆರ್‌ಎಸ್‌ಎಸ್ ಕಾರ್ಯಕರ್ತರು ಮಾಡಿದ್ದಾರೆ. ಮೇವಿನ ಅವಶ್ಯಕತೆ ಇರುವ ನಂದಗಾಂವ, ಜಂಬಗಿ ಕೆ.ಡಿ., ರೂಗಿ, ಮುಧೋಳ, ಗುಲಗಾಲಜಂಬಗಿ ಗ್ರಾಮಗಳಿಗೆ 4 ಟ್ರಕ್, ಎರಡು ಟ್ರೇಲರ್ ಮೇವು ಒದಗಿಸಿದ್ದಾರೆ.

ಕಿಟ್ ವಿತರಣೆ
ಆರ್ಥಿಕವಾಗಿ ಅತ್ಯಂತ ಕೆಳಮಟ್ಟದಲ್ಲಿದ್ದ 900 ಕುಟುಂಬಗಳಿಗೆ ಕನಿಷ್ಠ 15 ದಿನಗಳಿಗೆ ಆಗುವಷ್ಟು ಅಕ್ಕಿ, ಸಕ್ಕರೆ, ಬೆಲ್ಲ, ಖಾರದ ಪುಡಿ,ಬೇಳೆ, ಉಪ್ಪು, ಎಣ್ಣೆ ಸಹಿತ ದವಸ ಧಾನ್ಯಗಳು ಹಾಗೂ ಹಾಸಿಗೆ, ಬಟ್ಟೆ, ಸೀರೆಗಳಿರುವ ಕಿಟ್ ವಿತರಿಸಲಾಗುತ್ತಿದೆ. ಮಂಗಳವಾರ ರೂಗಿ ಗ್ರಾಮದಲ್ಲಿ ಸಿದ್ದು ಚಿಕದಾನಿ, ರಾಮಕೃಷ್ಣ ಬುದ್ನಿ, ಶಶಿದರ ಬುದ್ನಿ, ಸುರೇಶ ನಿಂಗಪ್ಪನವರ, ಅಡವೇಶ ಛಬ್ಬಿ, ಮೋಹನ್ ಡಿಸ್ಕೋಡ್ ನೇತೃತ್ವದಲ್ಲಿ ಸಾಮಗ್ರಿ ವಿತರಣೆ ಮಾಡಲಾಯಿತು.

ಸಂಘದ ಕಾರ್ಯಕರ್ತರು ಹದಿನಾಲ್ಕು ದಿನಗಳಿಂದ ತಾಲೂಕಿನಲ್ಲಿ ಎಡೆಬಿಡದೆ ಕಾರ್ಯ ಮಾಡುತ್ತಿದ್ದಾರೆ. 36 ಗ್ರಾಮಗಳ ಅತ್ಯಂತ ಕಡು ಬಡವರಿಗೆ ಕಿಟ್ ವಿತರಣೆ ಕಾರ್ಯ ನಡೆಯುತ್ತಿದೆ. ಅಲ್ಲದೆ, ಜಾನುವಾರುಗಳಿಗೆ ಮೇವು, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ನೀಡಿದ್ದೇವೆ.
– ಸಿದ್ದು ಚಿಕದಾನಿ, ರಾಮಕೃಷ್ಣ ಬುದ್ನಿ, ಆರ್‌ಎಸ್‌ಎಸ್ ಮುಖಂಡರು ಮುಧೋಳ

ನಾವು ಅತ್ಯಂತ ಕಡು ಬಡವರು. ಕಾರ್ಯಕರ್ತರು ನಮ್ಮನ್ನು ತಮ್ಮ ಮನೆ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಒದಗಿಸಿದ್ದಾರೆ. ನಮ್ಮ ಮಕ್ಕಳಿಗೆ ನೋಟ್ ಪುಸ್ತಕ, ಜಾನುವಾರಗಳಿಗೆ ಮೇವು ನೀಡಿದ್ದಾರೆ.
– ರಾಮಪ್ಪ ಗುಲಗಾಲಜಂಬಗಿ ಸಂತ್ರಸ್ತರು

Leave a Reply

Your email address will not be published. Required fields are marked *