ನದಿಗೆ ಬಿದ್ದ ಬಾಲಕನ ರಕ್ಷಣೆ

ಮುಧೋಳ: ತಾಲೂಕಿನ ಮಾಚಕನೂರು ಗ್ರಾಮದ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಜ್ ಕಂ ಬ್ಯಾರೇಜ್ ಮೇಲಿಂದ ಬಿದ್ದ ಬಾಲಕನನ್ನು ಅದೇ ಗ್ರಾಮದ ಯುವಕ ಪ್ರಾಣದ ಹಂಗು ತೊರೆದು ಅರ್ಧ ಕಿ.ಮೀ. ಈಜಿ ಕಾಪಾಡಿದ್ದಾನೆ.

ಗುರುವಾರ ಸಂಜೆ ಬಾಲಕ ಶ್ರೀನಿವಾಸ ಪಾಟೀಲ (12) ತಡೆಗೋಡೆಯಿಲ್ಲದ ಬ್ರಿಜ್‌ನಲ್ಲಿ ನಡೆದು ಬರುವಾಗ ಆಯತಪ್ಪಿ ನದಿಗೆ ಬಿದ್ದಿದ್ದಾನೆ. ಬಾಲಕ ಬೀಳುವುದನ್ನು ಕಂಡ ರುದ್ರಯ್ಯ ಜಿಡ್ಡಿಮನಿ (19) ಕೂಡಲೇ ಭೋರ್ಗರೆಯುವ ನದಿಗೆ ಹಾರಿ ಅರ್ಧ ಕಿ.ಮೀ. ಈಜಿದ್ದಾನೆ. ಬಳಿಕ ರುದ್ರಯ್ಯನ ಗೆಳೆಯರಾದ ದುಂಡಯ್ಯ ಪೂಜಾರಿ, ದುರ್ಗಪ್ಪ ದಡ್ಡಿಮನಿ ನೆರವಿನಿಂದ ಬಾಲಕನ ಪ್ರಾಣ ರಕ್ಷಿಸಿದ್ದಾನೆ. ಯುವಕರ ಸಾಧನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಉದ್ಘಾಟನೆಗೊಂಡಿರುವ ಬ್ರಿಜ್ ಕಂ ಬ್ಯಾರೇಜ್ ಮೇಲೆ ನೂರಾರು ಜನ ಓಡಾಡುತ್ತಾರೆ. ತಡೆಗೋಡೆಯಿಲ್ಲದ ಕಾರಣ ಈ ಹಿಂದೆ ಹಲವಾರು ದುರ್ಘಟನೆಗಳು ಸಂಭವಿಸಿವೆ. ಈ ಬಗ್ಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸೂಕ್ತ ಕ್ರಮ ಕೈಗೊಳ್ಳದಿರುವುದು ದುದೈರ್ವದ ಸಂಗತಿಯಾಗಿದೆ. ಎರಡು ವರ್ಷಗಳ ಹಿಂದೆ ಓರ್ವ ವ್ಯಕ್ತಿ ನೀರಿಗೆ ಬಿದ್ದು ಸಾವನ್ನಪ್ಪಿದ್ದ. ಅದಾದ ಬಳಿಕ ಎತ್ತಿನ ಗಾಡಿ ಬಿದ್ದು ಎತ್ತುಗಳು ಗಾಯಗೊಂಡಿದ್ದವು.

ಮಾಚಕನೂರ ಬಳಿಯ ಬ್ರಿಜ್ ಕಂ ಬ್ಯಾರೇಜ್‌ನಲ್ಲಿ ಹಲವು ಸಲ ಅವಘಡಗಳು ಸಂಭವಿಸಿವೆ. ಕೂಡಲೇ ತಡೆಗೋಡೆ ನಿರ್ಮಿಸಿ ಸಂಭವಿಸಬಹುದಾದ ಅನಾಹುತ ತಡೆಯಬೇಕು.
– ಡಾ.ಶಿವಾನಂದ ಅಂತಾಪೂರ ಹಿರಿಯ ವೈದ್ಯರು ಮಾಚಕನೂರ

 

Leave a Reply

Your email address will not be published. Required fields are marked *