ಮೂಲ ಸೌಲಭ್ಯ ಒದಗಿಸಲು ಆಗ್ರಹ

ಮುಧೋಳ:ಮೂಲ ಸೌಲಭ್ಯಗಳನ್ನು ಕಲ್ಪಿಸಲು ಆಗ್ರಹಿಸಿ ನಗರ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಮುಧೋಳ ಬಸ್ ನಿಲ್ದಾಣ ಬಳಿ ನಡೆಯುತ್ತಿರುವ ಅನಿದಿಷ್ಟಾವಧಿ ಧರಣಿ ಸತ್ಯಾಗ್ರಹ ಶನಿವಾರ 3ನೇ ದಿನಕ್ಕೆ ಕಾಲಿಟ್ಟಿದೆ.

ಗುರುವಾರ ರಾತ್ರಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಜಮಖಂಡಿ ಉಪವಿಭಾಗಾಧಿಕಾರಿ ವಿಕ್ರಮ, ಸರ್ಕಾರದ ಯೋಜನೆ ಪ್ರಕಾರ ತೆರವು ಕಾರ್ಯಾಚರಣೆ ಮುಂದುರಿಸಲಾಗಿದೆ ಎಂದು ತಿಳಿಸಿದ್ದರು.

ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ, ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಧರಣಿನಿರತರನ್ನು ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿಸಲಾಗುವುದೆಂದು ಹೇಳಿದ್ದರು. ಅದರಂತೆ ಶುಕ್ರವಾರ ಬಾಗಲಕೋಟೆಯಲ್ಲಿ ಹಿತರಕ್ಷಣಾ ಸಮಿತಿ ಸದಸ್ಯರು ಸಿಎಂ ಭೇಟಿ ಮಾಡಿದರೂ ಯಾವುದೇ ಪ್ರಯೋಜನ ವಾಗಲಿಲ್ಲ ಎಂದು ಧರಣಿ ನಿರತರು ಶುಕ್ರವಾರ ವಿಜಯವಾಣಿಗೆ ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕಿ ಸುಲೋಚನಾ ಚಂದಾ ಮಾತನಾಡಿ, ಮೂಲ ಸೌಲಭ್ಯ ಕೇಳುವುದು ನಮ್ಮ ಹಕ್ಕು. ಅದು ಈಡೇರುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು.

ಸಿದ್ದು ಚಿಕದಾನಿ ಮಾತನಾಡಿದರು. ಸಮಿತಿಯ ಮಹಿಳಾ ಸದಸ್ಯರು ಶುಕ್ರವಾರ ಹೋರಾಟ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿದರು. ನಗರಸಭೆ ಸದಸ್ಯ ಡಾ. ಸತೀಶ ಮಲಘಾಣ, ಸುನಂದಾ ಪಾಟೀಲ, ವಂದನಾ ಕುಲಕರ್ಣಿ, ಅನಸೂಯಾ ಉತ್ತೂರ, ದುಂಡಪ್ಪ ಯರಗಟ್ಟಿ, ಗುರುಪಾದ ಕುಳಲಿ, ಬಸವರಾಜ ಮಹಾಲಿಂಗೇಶ್ವರಮಠ, ಕಲ್ಮೇಶ ಹನಗೂಜಿ ಮತ್ತಿತರರಿದ್ದರು.

ಮುಂದುವರಿದ ತೆರವು ಕಾರ್ಯ:ಗುರುವಾರ ರಾತ್ರಿ ಹೊರತು ಪಡಿಸಿ ಶುಕ್ರವಾರ ಬೆಳಗ್ಗೆ ಮತ್ತೆ ತೆರವು ಕಾರ್ಯ ಪ್ರಾರಂಭವಾಗಿದ್ದು, ಜಡಗಾಬಾಲ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ತೆರಳುವ ರಸ್ತೆಯಲ್ಲಿ ಕಾರ್ಯಾಚರಣೆ ನಡೆಯಿತು. ಶುಕ್ರವಾರ ಸಂತೆಯ ದಿನವಾಗಿದ್ದರಿಂದ ಟ್ರಾಫಿಕ್ ಕಿರಿಕಿರಿ ಉಂಟಾಗಿತ್ತು. ನಂತರ ಪೊಲೀಸರು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.