ರಸ್ತೆ ಅಭಿವೃದ್ಧಿಗೆ 37 ಕೋಟಿ ರೂ.

ಮುಧೋಳ: ನಗರದಲ್ಲಿ ಹಾಯ್ದು ಹೋಗಿರುವ ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ರೂಪಿಸಿ ಸಲ್ಲಿಸಿದ ಪ್ರಸ್ತಾವನೆ ಹಿನ್ನೆಲೆ ಸರ್ಕಾರ ಪ್ರಥಮ ಹಂತವಾಗಿ 5 ಕೋಟಿ ರೂ. ನೀಡಿದ್ದು, ಶೀಘ್ರ ಟೆಂಡರ್ ಕರೆದು ಹೆದ್ದಾರಿ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಗೋವಿಂದ ಕಾರಜೋಳ ತಿಳಿಸಿದರು.

ಮುಧೋಳ-ಅನಗವಾಡಿ ರಸ್ತೆಗೆ 13 ಕೋಟಿ ರೂ. ಹಾಗೂ ತಾಲೂಕಿನ ಉಳಿದ ರಸ್ತೆಗೆ 19 ಕೋಟಿ ರೂ. ಸೇರಿ ಒಟ್ಟು 37 ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಲೂಕಿನ 14 ಗ್ರಾಮಗಳಲ್ಲಿಯ ಜಗಜೀವನ್‌ರಾಮ್ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಭವನ ಪೂರ್ಣಗೊಳಿಸಲು 76 ಲಕ್ಷ ರೂ., ಎಸ್‌ಸಿ, ಎಸ್‌ಟಿ ಕಾಲನಿ ಅಭಿವೃದ್ಧಿಗೆ 1 ಕೋಟಿ ರೂ., ತಾಲೂಕಿನ ಬರ ಪರಿಹಾರಕ್ಕೆ 1 ಕೋಟಿ ರೂ., ಐದು ಗ್ರಾಮಗಳ ರಸ್ತೆಗೆ 3 ಕೋಟಿ ರೂ. ಮಂಜೂರು ದೊರೆತಿದೆ ಎಂದರು

ನಾಲ್ಕು ಜಿಲ್ಲೆಗೆ ಸರ್ಕಾರ ಸೀಮಿತ
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಾಮನಗರ, ಮಂಡ್ಯ, ಕೊಡಗು, ಬೆಂಗಳೂರು ಜಿಲ್ಲೆಗಳಿಗೆ ಹಾಗೂ ಪ್ರಭಾವಿ ಕಾಂಗ್ರೆಸ್ ಮುಖಂಡರ ಕ್ಷೇತ್ರಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಿದೆ ಎಂದು ಕಾರಜೋಳ ಆರೋಪಿಸಿದರು.

ಸಿದ್ದರಾಮಯ್ಯನವರನ್ನು ಕೈಹಿಡಿದ ಬಾಗಲಕೋಟೆ ಜಿಲ್ಲೆ ಜನತೆ ಋಣ ತೀರಿಸಲಾದರೂ ಜಿಲ್ಲೆಗೆ ಹೆಚ್ಚಿನ ಹಣವನ್ನು ಅವರು ಕೊಡಿಸಬಹುದಾಗಿತ್ತು. ಕೇವಲ ತಮ್ಮ ಕ್ಷೇತ್ರಕ್ಕೆ 300 ಕೋಟಿ ರೂ. ಹಾಗೂ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಕ್ಕೆ 100 ಕೋಟಿ ರೂ. ಕೊಟ್ಟು ಉಳಿದ ತಾಲೂಕುಗಳಿಗೆ 10 ರಿಂದ 20 ಕೋಟಿ ರೂ. ನೀಡಿದ್ದು ತಾರತಮ್ಯವನ್ನು ಎತ್ತಿತೋರಿಸುತ್ತದೆ. ಕೂಡಲೇ ಈ ತಾರತಮ್ಯ ಸರಿಪಡಿಸಿ ರಾಜ್ಯದಲ್ಲಿರುವ ಎಲ್ಲ 224 ಕ್ಷೇತ್ರಗಳಿಗೆ ಸಮಾನ ಅನುದಾನ ಬಿಡುಗಡೆ ಮಾಡಬೇಕು ಎಂದರು.

ಸಸಾಲಟ್ಟಿ ಯೋಜನೆಗೆ ಸಿದ್ದರಾಮಯ್ಯ ಸಿಎಂ ಇದ್ದಾಗ ವಿಧಾನಸಭೆ ಚುನಾವಣೆ ದೃಷ್ಟಿಯಿಂದ 140 ಕೋಟಿ ರೂ. ಮೀಸಲಿಟ್ಟಿದ್ದರು. ಈಗ ಅದನ್ನು ಹಿಂಪಡೆದಿದ್ದು, ಈ ಬಗ್ಗೆ ಮಾಜಿ ಸಿಎಂ ಚಕಾರ ಎತ್ತದಿರುವುದು ದುರದೃಷ್ಟಕರ. ಜತೆಗೆ ಕೃಷ್ಣಾ ಮೇಲ್ದಂಡೆ ಯೋಜನೆಗೂ ಅನುದಾನ ಮೀಸಲಿಡದೆ ಅನ್ಯಾಯ ಮಾಡಲಾಗಿದೆ.
ಗೋವಿಂದ ಕಾರಜೋಳ, ಶಾಸಕ