ಮುಧೋಳ ಅಭವೃದ್ಧಿ ಆದ್ಯತೆಯಾಗಲಿ

ಮುಧೋಳ: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವಧಿಯಲ್ಲಿ ನಗರದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸಮರ್ಪಕ ಅನುಷ್ಠಾನ ಜತೆಗೆ ಮೂಲಸೌಲಭ್ಯಗಳ ಒದಗಿಸಲು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮುತುವರ್ಜಿ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ ಸಲಹೆ ನೀಡಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಗಡದನ್ನವರ ವೃತ್ತದಿಂದ ಕುಸ್ತಿ ಕಣದವರೆಗೆ ರಸ್ತೆ ಕಾಮಗಾರಿ, ಬೈಪಾಸ್‌ಗೆ 50 ಕೋಟಿ ರೂ. ಬಿಡುಗಡೆಯಾಗಿದ್ದು ಅವುಗಳನ್ನು ಪೂರ್ಣಗೊಳಿಸಬೇಕು. ಶಾಶ್ವತ ಕುಡಿವ ನೀರಿನ ಯೋಜನೆಗಳನ್ನು ಮುಂದುವರಿಸುವುದರ ಜತೆಗೆ ನಗರದ ಸ್ವಚ್ಛತೆಗೆ ಮುಂದಾಗಬೇಕು ಎಂದು ಹೇಳಿದರು.

ಪ್ರವಾಹದಿಂದ ಮನೆ ಕಳೆದುಕೊಂಡ ನಿರಾಶ್ರಿತರ ಜೀವನ ಅತಂತ್ರಗೊಂಡಿದ್ದು, ಅವರಿಗೆ ಕೇಂದ್ರ ಸರ್ಕಾರ ನಯಾಪೈಸೆ ಪರಿಹಾರ ನೀಡಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಬೇಡವಾದ ಕೂಸು. ಹೀಗಾಗಿ ಕೇಂದ್ರಕ್ಕೆ ರಾಜ್ಯದಿಂದ 26 ಸಂಸದರನ್ನು ನೀಡಿದ್ದರೂ ಹಣ ನೀಡದೆ ಕೇವಲ ಬೂಟಾಟಿಕೆ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಕಾಶ್ಮೀರ್ ವಿಭಜನೆ ಸಾಧನೆ ಎಂದು ಬಿಂಬಿಸಿ, ವಿದೇಶದಲ್ಲಿ ಭಾಷಣ ಮಾಡಿ ಹೆಸರು ಗಳಿಸಿ ಎಲ್ಲ ಪಕ್ಷಗಳನ್ನು ತುಳಿದು ಬೆಳೆಯಬೇಕು ಎನ್ನುವ ಪ್ರಧಾನಿಗೆ ದೇಶದ ಆರ್ಥಿಕತೆ ಬಗ್ಗೆ ಕಿಂಚತ್ತೂ ಕಾಳಜಿ ಇಲ್ಲ. ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುವ ಮುನ್ನ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಅದನ್ನು ಬಿಟ್ಟು ಐಟಿ, ಇಡಿ ದಾಳ ಉರುಳಿಸುತ್ತ ಹೊರಟಿರುವುದು ಶೋಚನೀಯ ಸಂಗತಿ ಎಂದು ಹೇಳಿದರು.

ತಾಪಂ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ಭೀಮಸಿ ಕುರಿ, ಮಿರ್ಜಾ ನಾಯಕವಾಡಿ ಇತರರಿದ್ದರು.

ಕನ್ನಡಕ್ಕೆ ಅನ್ಯಾಯವಾದರೆ ಸಹಿಸಲ್ಲ
ಗೃಹಮಂತ್ರಿ ಅಮಿತ್ ಷಾ ಹಿಂದಿ ಭಾಷೆ ಹೇರುವ ಮೂಲಕ ಪ್ರಾದೇಶಿಕ ಭಾಷೆ ತುಳಿಯಲು ಹೊರಟಿರುವುದು ಖಂಡನಾರ್ಹ. ಇದನ್ನು ನಿಲ್ಲಿಸದಿದ್ದರೆ ಕನ್ನಡಿಗರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಕನ್ನಡಕ್ಕೆ ಅನ್ಯಾಯವಾದರೆ ಕನ್ನಡಿಗರು ಸುಮ್ಮನೆ ಕುಳಿತುಕೊಳ್ಳಲಾರರು ಎಂದು ತಿಮ್ಮಾಪುರ ಎಚ್ಚರಿಸಿದರು.

ನನಗೆ ಕಾಂಗ್ರೆಸ್ ಪಕ್ಷ ಸಾಕಷ್ಟು ಕೊಟ್ಟಿದೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿ ಅಲ್ಲ. ಒಂದು ವೇಳೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನ ನೀಡಿದರೆ ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ.
– ಆರ್.ಬಿ. ತಿಮ್ಮಾಪುರ ವಿಧಾನ ಪರಿಷತ್ ಸದಸ್ಯ

Leave a Reply

Your email address will not be published. Required fields are marked *