ವೆಂಕಟೇಶ ಕೆರೆ ನೀರು ಚರಂಡಿ ಪಾಲು

ವೆಂಕಟೇಶ ಗುಡೆಪ್ಪನವರ
ಮುಧೋಳ: ನಗರದ ವೆಂಕಟೇಶ ಮಹಾರಾಜ ಕೆರೆಯಿಂದ ಅನವಶ್ಯಕವಾಗಿ ನಿತ್ಯ ಸಾವಿರಾರು ಲೀಟರ್ ನೀರು ಚರಂಡಿ ಸೇರುವುದನ್ನು ತಪ್ಪಿಸಬೇಕಾಗಿದ್ದ ನಗರಸಭೆ ಅದಕ್ಕೆ ಪೈಪ್ ಅಳವಡಿಸಿ ಮತ್ತಷ್ಟು ಸುವ್ಯವಸ್ಥಿತವಾಗಿ ಹರಿದು ಹೋಗುವಂತೆ ಮಾಡಿದೆ.

ಸತತ ಬರದಿಂದ ನಗರದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆ ನಿತ್ಯ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ, ಪೋಲಾಗುತ್ತಿರುವ ವೆಂಕಟೇಶ ಕೆರೆಯ ನೀರು ತಡೆಹಿಡಿಯಬೇಕಿದ್ದ ಅಧಿಕಾರಿಗಳು ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ.

ಮುಧೋಳ ತಾಲೂಕಿನ ಹಲವು ಗ್ರಾಮಗಳಲ್ಲಿ ಹಾಗೂ ನಗರದ ಸಾಯಿ, ಆನಂದ ನಗರ ಸೇರಿ ಹಲವು ಕಡೆ ಕೊಳವೆ ಬಾವಿಗಳು ಭತ್ತಿ ಹೋಗಿವೆ. ಹೀಗಾಗಿ ನೀರಿಗಾಗಿ ಜನರು ಪರದಾಡುವ ಸ್ಥಿತಿ ತದೋರಿಗೆ. ಕೆರೆಯ ನೀರನ್ನು ಸಂರಕ್ಷಿಸಿದರೆ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ.

ಐತಿಹಾಸಿಕ ವೆಂಕಟೇಶ ಮಹಾರಾಜ ಕೆರೆಗೆ ತನ್ನದೆಯಾದ ಇತಿಹಾಸವಿದ್ದು, 17 ಸಾವಿರ ಜನಸಂಖ್ಯೆ ಇದ್ದ ಸಂದರ್ಭದಲ್ಲಿ ಕಟ್ಟಿಸಲಾಗಿತ್ತು. ಮಾಜಿ ಜಿಪಂ ಅಧ್ಯಕ್ಷ ಶಿವಕುಮಾರ ಮಲಘಾಣ ಅಧ್ಯಕ್ಷರಾಗಿದ್ದಾಗಿ ಬೃಹತ್ ಪ್ರಮಾಣದಲ್ಲಿ ಹೂಳೆತ್ತಿ ಈಗಿರುವ 80 ಸಾವಿರ ಜನಸಂಖ್ಯೆಗೆ ಕನಿಷ್ಠ ಹದಿನೈದು ದಿನಕೊಮ್ಮೆಯಾದರೂ ನೀರು ಪೂರೈಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗಿತ್ತು. ಆದರೆ, ಇಲ್ಲಿಯವರೆಗೆ ಈ ಕೆರೆಯ ಬಗ್ಗೆ ಯಾರೂ ಚಿಂತನೆ ಮಾಡಿಲ್ಲ. ಹೀಗಾಗಿ ಶಿವಾಜಿ ನಗರದ ಹತ್ತಿರದ ಕೆರೆಯಿಂದ ನಿತ್ಯ ಗಂಟೆಗೆ ನೂರಾರು ಲೀಟರ್ ಬಸಿನೀರು ನೇರವಾಗಿ ಚರಂಡಿ ಪಾಲಾಗುತ್ತಿದೆ. ಇದನ್ನು ಗಮನಿಸಿ ಸಾರ್ವಜನಿಕರಿಗೆ ಗೊತ್ತಾಗಬಾರದೆಂದು ಪೈಪ್ ಹಾಕಿ ನೇರವಾಗಿ ಚರಂಡಿಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ.

ನಿರುಪಯುಕ್ತ ನೀರೆಂದು ನಂಬಿರುವ ಜನತೆ
ಈ ಸಮಸ್ಯೆ ಬಗ್ಗೆ ಅಲ್ಲಿನ ಜನರು, ಅದು ಶುದ್ಧ ಕುಡಿಯುವ ನೀರಿನ ಘಟಕದಿಂದ ಫಿಲ್ಟರ್ ಆಗಿ ನಿರುಪಯುಕ್ತವಾಗಿ ಹರಿದು ಹೋಗುವ ನೀರು ಎಂದು ಭಾವಿಸಿದ್ದಾರೆ. ಆದರೆ, ಈ ಕೆರೆಗೆ ನೇರವಾಗಿ ಜಾಲಿಬೇರ ಬ್ಯಾರೇಜ್‌ದಿಂದ ನೀರು ಹರಿಸಲಾಗುತ್ತಿದ್ದು, ಈ ರೀತಿಯಾಗಿ ಪೋಲಾಗುತ್ತ ಸಾಗಿದರೆ ಕೆಲವೇ ದಿನಗಳಲ್ಲಿ ಖಾಲಿಯಾಗಲಿದೆ. ಅಧಿಕಾರಿಗಳು ಎಚ್ಚರಿಕೆ ವಹಿಸಿ ಪೋಲಾಗುವ ನೀರನ್ನು ಮರಳಿ ಕೆರೆಗೆ ಸೇರಿಸಿ ಆಗುವ ಹಾನಿ ತಪ್ಪಿಸಬೇಕಿದೆ.

ಕೆರೆಯಿಂದ ನಿತ್ಯ 15 ರಿಂದ 20 ಗಂಟೆ ಕಾಲ ನೀರು ಹೋಗುತ್ತದೆ. ನಿತ್ಯ ಸಾವಿರಾರು ಲೀಟರ್ ನೀರು ಚರಂಡಿ ಪಾಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದಾಗ ಪೈಪ್ ಹಾಕಿ ಅದನ್ನು ಯಾರಿಗೂ ಗೊತ್ತಾಗದ ಹಾಗೆ ಚರಂಡಿಗೆ ಜೋಡಿಸಿದ್ದು ವಿಪರ್ಯಾಸ.
ಶಂಕರ ಮುಧೋಳ, ನಿವಾಸಿ

ಅದು ಕೆರೆಯ ಬಸಿ ನೀರು ಇರಬಹುದು. ಆದರೆ, ಈ ರೀತಿ ಅನಾಯಾಸವಾಗಿ ಜೀವಜಲ ಪೋಲಾಗುತ್ತಿರುವುದು ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ಅದನ್ನು ತಡೆಗಟ್ಟುವ ಪ್ರಯತ್ನ ಮಾಡುತ್ತೇವೆ. ನೀರು ಪೋಲಾಗದಂತೆ ಎಚ್ಚರಿಕೆ ವಹಿಸಲಾಗುವುದು.
ಆರ್.ಪಿ. ಜಾಧವ, ಪೌರಾಯುಕ್ತ ನಗರಸಭೆ ಮುಧೋಳ