ಉಪಕಾರ ಮಾಡಿದವರನ್ನು ಸ್ಮರಿಸಿ

ಮುಧೋಳ: ನಿತ್ಯ ಜೀವನದಲ್ಲಿ ಉಪಕಾರ ಮಾಡಿದವರ ಮತ್ತು ನಮಗೆ ಸರ್ವಸ್ವವನ್ನೇ ನೀಡಿದ ಭಗವಂತನನ್ನು ಸ್ಮರಿಸುವುದನ್ನು ಮರೆಯಬಾರದು ಎಂದು ಉತ್ತರಾದಿ ಮಠಾಧೀಶ ಸತ್ಯಾತ್ಮ ತೀರ್ಥ ಶ್ರೀಗಳು ಹೇಳಿದರು.

ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ತಾಲೂಕ ಬ್ರಾಹ್ಮಣ ಸಂಘ ಸೋಮವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ದಾನಿಗಳನ್ನು ಗೌರವಿಸಿ, ಆರೋಗ್ಯ ಸಹಾಯ ಪತ್ರ ವಿತರಿಸಿ ಮಾತನಾಡಿದರು. ದೇವರು ನಮಗೆ ಎಲ್ಲ ಸೌಭಾಗ್ಯಗಳನ್ನು ನೀಡಿದ್ದಾನೆ. ಅವನ ಸ್ಮರಣೆ, ಪೂಜೆ, ಧ್ಯಾನ ಮಾಡಿದರೆ ಅದರ ಲವನ್ನು ಆ ಭಗವಂತ ಮರಳಿ ನೀಡುತ್ತಾನೆ ಎಂದು ಹೇಳಿದರು.

ಜೀವನದಲ್ಲಿ ಉಪಕಾರ ಮಾಡಿದವರ ಸ್ಮರಣೆ ರೂಢಿಸಿಕೊಳ್ಳಿ. ಯೋಗ್ಯರಿಗೆ ದಾನ ಮಾಡಿ, ಧರ್ಮಭ್ರಷ್ಟರಾದವರಿಗೆ ದಾನ ಮಾಡಿದರೆ ಅದರ ಪಾಪ ನಿಮಗೆ ತಟ್ಟುತ್ತದೆ. ನಿತ್ಯ ದೇವರು, ಧರ್ಮ, ಪೂಜೆ ಮಾಡುವವರಿಗೆ ದಾನ ಮಾಡಿ. ಅದರಿಂದ ಮನಸ್ಸು ತೃಪ್ತವಾಗಿ, ಪುಣ್ಯ ದೊರಕುತ್ತದೆ ಎಂದರು.

ಬ್ರಾಹ್ಮಣನಾಗಿ ಹುಟ್ಟಿದ ಮಾತ್ರಕ್ಕೆ ನಿಜವಾದ ಬ್ರಾಹ್ಮನಾಗುವುದಿಲ್ಲ, ನಿತ್ಯ ಧರ್ಮಪಾಲನೆ ಮಾಡುವವನೇ ನಿಜವಾದ ಬ್ರಾಹ್ಮಣ. ಧರ್ಮ ಎಂದರೆ ಪೂಜೆ ಮಾತ್ರವಲ್ಲ. ಪ್ರತಿ ಹಂತದಲ್ಲಿ ನೀವು ನಡೆದುಕೊಳ್ಳುವ ರೀತಿ ಮತ್ತು ನಡೆಯಾಗಿದೆ ಎಂದರು.

ಈ ಬಾರಿಯ ಶಿಬಿರಾರ್ಥಿಗಳು ಕಲಿತ ಪಾಠದ ಭಾಗಗಳನ್ನು ಗುರುಗಳ ಮುಂದೆ ಒಪ್ಪಿಸಿದರು. ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಅಶೋಕ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ದಿಡ್ಡಿ ಸ್ವಾಗತಿಸಿದರು, ಗಿರೀಶ ಆನಿಖಿಂಡಿ ನಿರೂಪಿಸಿದರು, ಜಿ.ಜಿ. ಅಣ್ಣಿಗೇರಿ ವರದಿ ವಾಚಿಸಿದರು. ಪ್ರಹ್ಲಾದ ದೇಶಪಾಂಡೆ ವಂದಿಸಿದರು.

ಹಮ್ಮಿಣಿ ಅರ್ಪಣೆ
ವಿಶ್ವ ಮಾಧ್ವ ಮಹಾ ಪರಿಷತ್ ಹಾಗೂ ಸದ್ಧರ್ಮ ಮಂಡಳ ಅವರಿಂದ ಬ್ರಾಹಣ ಸಂಘದ ರಾಜ್ಯ ಉಪಾಧ್ಯಕ್ಷ ಗುರುರಾಜ ಕಟ್ಟಿ, ಪಾಂಡುರಂಗಾಚಾರ್ಯ ಜೋಶಿ ಸುಬ್ಬಣ್ಣಾಚಾರ್ಯ ಮನಗೂಳಿ, ಆನಂದ ಜೇರೆ, ಸಂಜೀವ ಮೋಕಾಶಿ ಅವರು ಶ್ರೀಗಳಿಗೆ ಹಮ್ಮಿಣಿ ಅರ್ಪಿಸಿದರು. ಬಳಿಕ ತಾಲೂಕಿನ ಭಕ್ತರಿಗೆ ಮುದ್ರಾಧಾರಣೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

Leave a Reply

Your email address will not be published. Required fields are marked *