ಯದುರೇಶ್ವರ ಶಿವ ಮಂದಿರ ಲೋಕಾರ್ಪಣೆ ನಾಳೆ

ಮುಧೋಳ: ತಾಲೂಕಿನ ಮುದ್ದಾಪುರ ಗ್ರಾಮ ವ್ಯಾಪ್ತಿಯಲ್ಲಿರುವ ಜೆ.ಕೆ. ಸಿಮೆಂಟ್ ಕಂಪನಿ ಆವರಣದಲ್ಲಿ ಕಲಾತ್ಮಕ ಕೆತ್ತನೆಯಿಂದ ಕೂಡಿದ ಯದುರೇಶ್ವರ ಶಿವ ಮಂದಿರ ಜೂನ್ 14ರಂದು ಲೋಕಾರ್ಪಣೆಗೊಳ್ಳಲಿದೆ.

ರಾಜಸ್ಥಾನದ ಬನ್ಸಿ ಪಹಾರಪುರದ ‘ಪಿಂಕ್’ ಕಲ್ಲಿನಲ್ಲಿ ಕೆತ್ತಿರುವ ಮನಮೋಹಕ ಚಿತ್ತಾರಗಳು ಮನ ಸೂರೆಗೊಳ್ಳುತ್ತಿದೆ. ಮಂದಿರದ ಕಂಬಗಳು, ಮೇಲ್ಛಾವಣಿಯಲ್ಲಿ ಕುಸುರಿ ಕಲೆ ಅರಳಿದೆ. ವಿಶೇಷವಾಗಿ ನರ್ಮದಾ ನದಿ ತಟದಿಂದ ಶಿವಲಿಂಗವನ್ನು ತರಿಸಲಾಗಿದೆಯಂತೆ.

ಕಾರ್ಖಾನೆ ಹಾಗೂ ಪದಮಪತ್ತ ವಸತಿ ಸಮುಚ್ಛಯದ ಮಧ್ಯೆ ನಿರ್ಮಾಣಗೊಂಡಿರುವ ದೇವಸ್ಥಾನವನ್ನು ಅಹ್ಮದಬಾದ್ ನಗರದ ಇಂಜಿನಿಯರ್ ಸಿ.ಬಿ. ಸೋಮಾಪುರ ವಿನ್ಯಾಸಮಾಡಿದ್ದು, 11,700 ಚದುರ ಅಡಿಗಳಲ್ಲಿ ಮಂದಿರದ ಕಟ್ಟಡವನ್ನು ಕೇವಲ 15 ತಿಂಗಳಲ್ಲಿ ಪೂರ್ಣಗೊಳಿಸಿದ್ದಾರೆ. ಅಲ್ಲದೆ ದೇವಸ್ಥಾನದ ಸುತ್ತ 6 ಎಕರೆ ಜಾಗದಲ್ಲಿ ವಿಶಾಲವಾದ ಉದ್ಯಾನ ನಿರ್ಮಿಸಲಾಗಿದ್ದು, ಶ್ರದ್ಧಾಭಕ್ತಿಯ ಕೇಂದ್ರವಾಗಿ ಕಂಗೊಳಿಸುತ್ತಿದೆ.

ಪುರಾತನ ದೇಗುಲಗಳಂತೆ ವಾಸ್ತುಶಾಸದ ಅನುಸಾರ, ಸಿಮೆಂಟ್ ಹಾಗೂ ಕಬ್ಬಿಣ ಬಳಸದೆ ದೇವಸ್ಥಾನವನ್ನು ನಿರ್ಮಿಸಿದ್ದು, ನೂರಾರು ವರ್ಷ ತಾಳಿಕೆ ಬರುತ್ತದೆ. ದೇವಾಲಯ ನಿರ್ಮಾಣಕ್ಕೂ ಮುನ್ನ ಜೆ.ಕೆ. ಗ್ರೂಪ್‌ನ ಮಾಲೀಕ ಯದುಪತಿ ಸಿಂಘಾನಿಯಾ, ನಿರ್ದೇಶಕ ಮಾಧವಕೃಷ್ಣ ಸಿಂಘಾನಿಯಾ, ರಾಘವಪತ್ತ ಸಿಂಘಾನಿಯಾ ಮುತುವರ್ಜಿ ವಹಿಸಿ ಹಲವಾರು ಮಂದಿರಗಳನ್ನು ಪರಿವೀಕ್ಷಿಸಿ, ವಿಶಿಷ್ಟವಾದ ನೀಲಿ ನಕಾಶೆಯನ್ನು ಹಾಕಿಸಿ ಮಂದಿರ ನಿರ್ಮಾಣಕಾರ್ಯಕ್ಕೆ ಯೋಜನೆ ರೂಪಿಸಿದ್ದರ ಲ ಇಂದು ಕಾಣುತ್ತಿದೆ ಎನ್ನುತ್ತಾರೆ ಸ್ಥಳೀಯ ಘಟಕ ಮುಖ್ಯಸ್ಥ ಆರ್.ಬಿ. ತ್ರಿಪಾಠಿ.

ಜೂನ್ 14ರಂದು ಬೆಳಗ್ಗೆ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದ್ದು, ಹದಿನೈದು ಸಾವಿರ ಜನರಿಗೆ ಆಮಂತ್ರಣವನ್ನು ನೀಡಲಾಗಿದೆ. ಅತಿಥಿಗಳಿಗೆ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದ್ದು. ಮಂದಿರ ಪ್ರವೇಶಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದ್ದು, ಕೆಲವೇ ತಿಂಗಳುಗಳಲ್ಲಿ ಇದೊಂದು ಪ್ರಸಿದ್ಧ ಪ್ರವಾಸಿ ತಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಅಪರೂಪದ ಶಿವ ಮಂದಿರ ನಿರ್ಮಿಸಲಾಗಿದೆ. ಗಾರ್ಡನ್ ಕಾರ್ಯ ಭರದಿಂದ ಸಾಗಿದೆ. ಇದೊಂದು ಭಕ್ತಿ ಕೇಂದ್ರವಾಗಿ ಈ ಭಾಗದ ಜನರು ಇಲ್ಲಿ ಬಂದು ಸಂತೋಷದಿಂದ ಕಾಲ ಕಳೆಯಲು ಎಲ್ಲ ವ್ಯವಸ್ಥೆ ಕಲ್ಪಿಸಲು ಆಡಳಿತ ಮಂಡಳಿ ಬದ್ಧವಾಗಿದೆ.
ಆರ್.ಬಿ.ಎಂ. ತ್ರಿಪಾಠಿ ಜೆ.ಕೆ. ಸಿಮೆಂಟ್ ಘಟಕ ಮುಖ್ಯಸ್ಥ

Leave a Reply

Your email address will not be published. Required fields are marked *