ನೀರು, ಮೇವು ವಿತರಣೆಗೆ ಮುಂದಾಗಿ

ಮುಧೋಳ: ತಾಲೂಕಿನಲ್ಲಿ ನಾಲ್ಕು ಮೇವು ಬ್ಯಾಂಕ್, ಎರಡು ಗೋ ಶಾಲೆ ತೆರೆಯಲು ಹಿಂದಿನ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ, ಕೇವಲ ಒಂದು ಮೇವು ಬ್ಯಾಂಕ್ ಆರಂಭಿಸಿದ್ದೀರಿ. ಕೂಡಲೇ ಮುಧೋಳ, ಮೆಟಗುಡ್ಡ ಹಾಗೂ ಬೆಳಗಲಿ ಗ್ರಾಮಗಳಲ್ಲಿ ಮೇವು ಬ್ಯಾಂಕ್ ಆರಂಭಿಸಿ ಎಂದು ಶಾಸಕ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಶುಕ್ರವಾರ ನಡೆದ ಬರ ನಿರ್ವಹಣೆ ಪರಿಶೀಲನೆ ಸಭೆಯಲ್ಲಿ ಮಾತನಾಡಿ ಅವರು, ಮೂರು ವಾರಗಳಿಗೆ ಸಾಕಾಗುವಷ್ಟು ಮೇವಿದೆ ಎನ್ನುತ್ತೀರಿ, ಎಲ್ಲಿದೆ ಮೇವು? ಇಂದೇ ಮಳೆಯಾದರೂ ದನಗಳಿಗೆ ಮೇವು ದೊರೆಯಲು ಮೂರು ತಿಂಗಳು ಬೇಕು. ಹೀಗಾಗಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಗೋವಿಂದ ರಾಠೋಡ ಮಾತನಾಡಿ, ಲೋಕಾಪುರದಲ್ಲಿ ಮೇವು ಬ್ಯಾಂಕ್ ಆರಂಭವಾಗಿದ್ದು, 2.20 ಮೆಟ್ರಿಕ್ ಟನ್ ಜೋಳದ ಕಣಕಿ (ದಂಟು) ದಾಸ್ತಾನಿದೆ. ಒಂದು ದನಕ್ಕೆ ಪ್ರತಿ ದಿನ 5 ಕೆಜಿ ಮೇವನ್ನು ಕೆಜಿಗೆ 2 ರೂ.ನಂತೆ ಮಾರಾಟ ಮಾಡಲಾಗುತ್ತಿದೆ ಎಂದರು.

ತಾಲೂಕಿನಲ್ಲಿ 48,838 ಆಕಳು, ಎತ್ತುಗಳಿವೆ. 55,771 ಎಮ್ಮೆ, ಕೋಣಗಳಿದ್ದು, ಈ ದಾಸ್ತಾನು ಒಂದು ದಿನಕ್ಕೂ ಸಾಕಾಗುವುದಿಲ್ಲ ಕೂಡಲೇ ಮೇವು ಬ್ಯಾಂಕ್‌ಗಳ ಸಂಖ್ಯೆ ಹೆಚ್ಚಿಸಿ ಎಂದು ಕಾರಜೋಳ ಸೂಚಿಸಿದರು.
ಅರಣ್ಯ ಪ್ರದೇಶದ ಕೊನೆಯ ಭಾಗದಲ್ಲಿ ಕೊಳವೆಬಾವಿ ಕೊರೆಸಲು ಅರಣ್ಯ ಅಧಿಕಾರಿಗಳು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಶಾಸಕರ ಗಮನಕ್ಕೆ ತಂದಾಗ ಕೆರಳಿದ ಕಾರಜೋಳ, ಅರಣ್ಯ ಇಲಾಖೆಯ ಬೇಜವಾಬ್ದಾರಿಂದ ನಾಡಿನಲ್ಲಿ ಸಮಸ್ಯೆ ಹೆಚ್ಚಿದೆ. ಕೋಟ್ಯಂತರ ಅನುದಾನ ನೀಡಿದರೂ ಲಿತಾಂಶ ಶೂನ್ಯವಾಗಿದೆ. ಅಂಕಿ ಅಂಶಗಳನ್ನು ನೋಡಿದರೆ ರಾಜ್ಯವೇ ಕಾಡು ಆಗಬೇಕು. ಕುಡಿಯುವ ನೀರಿಗೆ ಸರ್ಕಾರ ಕೊರೆಸುವ ಕೊಳವೆಬಾವಿ ಕೆಲಸಕ್ಕೆ ತೊಂದರೆ ನೀಡಿದರೆ ಸರಿ ಇರುವುದಿಲ್ಲ ಎಂದು ಎಚ್ಚರಿಸಿದರು. ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಮುಧೋಳದಲ್ಲಿ ಟ್ಯಾಂಕರ್‌ಗಳ ಸಂಖ್ಯೆ ಹೆಚ್ಚಿಸಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದರು.

ಜಿಪಂ ಸದಸ್ಯ ಭೀಮನಗೌಡ ಪಾಟೀಲ, ತಹಸೀಲ್ದಾರ್ ಡಿ.ಜಿ.ಮಹಾತ್, ತಾಪಂ ಇಒ ಬಸವರಾಜ ಅಡವಿಮಠ ಇದ್ದರು.

ಘಟಪ್ರಭಾ ನದಿಗೆ ನೀರು
ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಮೇ 24 ರಿಂದ 2.10 ಟಿಎಂಸಿ ಅಡಿ ನೀರು ಬಿಡಲಾಗುತ್ತಿದೆ. ಅಧಿಕಾರಿಗಳು ನೀರನ್ನು ಸಮರ್ಥವಾಗಿ ಬಳಿಕೆ ಮಾಡಿಕೊಂಡು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಕಾರಜೋಳ ಹೇಳಿದರು.

Leave a Reply

Your email address will not be published. Required fields are marked *