ಮದುವೆಗೆ ಹೋದರೂ ಬಿಡದ ಜವರಾಯ!

ಅಶೋಕ ಶೆಟ್ಟರ ಬಾಗಲಕೋಟೆ: ಆತ ರಾತ್ರಿ ಪಾಳಿ ಕೆಲಸ ಮುಗಿಸಿ ಬೆಳ್ಳಂಬೆಳಗ್ಗೆ ಮನೆಗೆ ಹೋಗಿದ್ದರು. ಪತಿಯ ದಾರಿ ಕಾಯುತ್ತಿದ್ದ ಮಡದಿ ಜತೆ ಮಗನನ್ನು ಕರೆದುಕೊಂಡು ಸ್ನೇಹಿತರ ಮದುವೆಗೆಂದು ಹೊರಟು ನಿಂತಿದ್ದರು. ಮದುವೆ ಹೋಗಿ ಬಿಟ್ಟಿದ್ದರೆ ಆ ಜೀವ ಬದುಕುಳಿಯುತ್ತಿತ್ತು.

ಆದರೆ, ನಾನೊಂದು ಬಗೆದರೆ ದೈವ ಮತ್ತೊಂದು ಬಗೆಯಿತು ಎಂಬಂತೆ ಅಷ್ಟರಲ್ಲಿ ರಿಂಗಣಿಸಿದ ಪೋನ್ ಜವರಾಯನ ಸಂದೇಶ ಎನ್ನುವುದು ಆತನಿಗೆ ತಿಳಿಯಲೇ ಇಲ್ಲ. ಸ್ವಲ್ಪ ಹೊತ್ತಿನಲ್ಲಿ ಕರೆ ಬಂದ ಸ್ಥಳಕ್ಕೆ ಹೋಗಿದ್ದೇ ಬಂತು. ಮರಳಿ ಮನೆ ತಲುಪಲಿಲ್ಲ. ಡಿಸ್ಟಿಲರಿ ಫ್ಯಾಕ್ಟರಿ ಸ್ಫೋಟ ಆತನನ್ನು ಬಲಿಪಡೆದಿತ್ತು. ಕುಟುಂಬವನ್ನು ಅನಾಥ ಮಾಡಿತ್ತು.

ಭಾನುವಾರ ಮಧ್ಯಾಹ್ನ ಮುಧೋಳ ಪಟ್ಟಣದಲ್ಲಿ ನಡೆದ ನಿರಾಣಿ ಡಿಸ್ಟಿಲರಿ ಫ್ಯಾಕ್ಟರಿಯ ಇಟಿಪಿ ಘಟಕ ಸ್ಪೋಟದ ದುರಂತದಲ್ಲಿ ಮಡಿದವರ ನಾಲ್ವರ ಪೈಕಿ ಒಂದು ಕುಟುಂಬದ ಕಂಬನಿ ಕಥೆಯಿದು.

ಹೌದು, ದುರಂತದಲ್ಲಿ ಮೃತಪಟ್ಟಿರುವ ನಾಲ್ವರ ಪೈಕಿ ಶಿವಾನಂದ ಹೊಸಮಠ (43) ಸಹ ಒಬ್ಬರು. ಮೂಲತಃ ಸವದತ್ತಿ ತಾಲೂಕಿನ ಸೊಪ್ಪಡ್ಲ ಗ್ರಾಮದ ಶಿವಾನಂದ ಮುಧೋಳ ತಾಲೂಕಿನ ಯಡಳ್ಳಿಯಲ್ಲಿ ಪತ್ನಿ ಮನೆಯಲ್ಲಿದ್ದರು. ಒಂದು ವರ್ಷದಿಂದ ಮುಧೋಳದಲ್ಲಿರುವ ನಿರಾಣಿ ಗ್ರುಪ್​ನ ಡಿಸ್ಟಿಲರಿಯಲ್ಲಿ ಆಪರೇಟರ್ ಆಗಿ ಕೆಲಸಕ್ಕೆ ಸೇರಿದ್ದರು. ಕುಟುಂಬವೂ ಚೆನ್ನಾಗಿ ಸಾಗಿತ್ತು.

ಆದರೆ, ವಿಧಿಗೆ ಇದು ಇಷ್ಟ ಬರಲಿಲ್ಲವೇನೋ ? ಶನಿವಾರ ರಾತ್ರಿ ಕೆಲಸ ಮುಗಿಸಿದ್ದ ಅವರು ಭಾನುವಾರ ಬೆಳಗ್ಗೆ ಮನೆಗೆ ಹೋಗಿದ್ದರು. ಪತ್ನಿ ಅನ್ನಪೂರ್ಣ ಸ್ನೇಹಿತೆಯ ಮಗನ ಮದುವೆ ಮುಧೋಳದಲ್ಲಿ ಇತ್ತು.

ಹೀಗಾಗಿ ಪತಿ, ಪತ್ನಿ ಹಾಗೂ ಪುತ್ರ ಮೂವರು ಸೇರಿ ಬೈಕ್​ನಲ್ಲಿ ಮದುವೆ ಮಂಪಟಕ್ಕೆ ಹೋಗಿದ್ದರು. ಅಷ್ಟರಲ್ಲಿ ಕಾರ್ಖಾನೆಯಿಂದ ಸಹೋದ್ಯೋಗಿಯೊಬ್ಬರು ಕರೆ ಮಾಡಿದ್ದು, ಮಧ್ಯಾಹ್ನದ ಕೆಲಸಕ್ಕೆ ಬರುವ ಕಾರ್ವಿುಕ ರಜೆ ಮಾಡಿದ್ದಾರೆ. ಹೀಗಾಗಿ ನೀನೇ ಬಂದುಬಿಡು ಎಂದು ಮನವಿ ಮಾಡಿದರು.

ಇದಕ್ಕೆ ಒಪ್ಪಿ ಶಿವಾನಂದ ಕೆಲಸಕ್ಕೆ ಹೊರಟು ನಿಂತಾಗ ಪತ್ನಿ ಅನ್ನಪೂರ್ಣಗೆ ಮುನಿಸು ಮಾಡಿಕೊಂಡರು. ಆದರೆ, ಕೆಲಸಕ್ಕೆ ಹೋಗಬೇಕು ಎನ್ನುವ ಕಾರಣಕ್ಕೆ ಹೊರಟುನಿಂತರು. ಪಕ್ಕದಲ್ಲಿ ಹೊಸಬಟ್ಟೆ ತೊಟ್ಟುಕೊಂಡು ನಿಂತಿದ್ದ ಒಂಭತ್ತು ವರ್ಷದ ಮನೋಜನನ್ನು ಕಾರ್ಖಾನೆಗೆ ಕರೆದುಕೊಂಡು ಹೋಗಿ ಸಹೋದ್ಯೋಗಿಗಳಿಗೆ ಸುಂದರವಾಗಿ ಕಾಣಿಸುತ್ತಿದ್ದ ಮನೋಜನನ್ನು ತೋರಿಸಿ, ಆನಂದ ಪಡಬೇಕೆಂದು ಮಗನನ್ನು ಕರೆದುಕೊಂಡು ಹೋಗಿದ್ದ.

ಆಗಲೇ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದ. ನೋಡ ನೋಡುತ್ತಿದ್ದಂತೆ ಭಾರಿ ಸದ್ದು ಕೇಳಿ ಇಡೀ ಬಿಲ್ಡಿಂಗ್ ಉರುಳಿ ಬಿದ್ದಿತು. ಈ ದುರಂತದಲ್ಲಿ ಶಿವಾನಂದ ಸ್ಥಳದಲ್ಲೇ ಮೃತಪಟ್ಟರೆ ಪುತ್ರ ಮನೋಜ ಅದೃಷ್ಟದ ರೀತಿಯಲ್ಲಿ ಬದುಕು ಉಳಿದಿದ್ದ. ಮದುವೆಗೆ ಹೋದರೂ ಬೆಂಬಿಡದೇ ಕಾಡಿದ ಜವರಾಯ ಮಾತ್ರ ತನ್ನ ಮೇಲಾಟ ನಡೆಸಿ, ಶಿವಾನಂದನನ್ನು ಬಲಿತೆಗೆದುಕೊಂಡಿದ್ದ.

ಪತ್ನಿ, ಪುತ್ರ ಕಾರ್ಖಾನೆಗೆ ಹೋಗಿದ್ದಾರೆ ಎನ್ನುವ ವಿಶ್ವಾಸದಲ್ಲಿದ್ದ ಅನ್ನಪೂರ್ಣಗೆ ದುರಂತದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಏನೋ ಒಂದು ಘಟನೆ ಆಗಿದೆ. ಪತಿ, ಪುತ್ರನಿಗೆ ಪೆಟ್ಟು ಬಿದ್ದಿದೆ ಎಂದಷ್ಟೇ ಆ ಹೆಣ್ಣು ಮಗಳಿಗೆ ಗೊತ್ತಿದೆ. ಪತಿ ಶಿವಾನಂದ ಬಾರದ ಲೋಕಕ್ಕೆ ತೆರಳಿದ್ದಾರೆ ಎನ್ನುವ ಮಾಹಿತಿ ಗೊತ್ತಿಲ್ಲ.

ಪತಿ ಮತ್ತು ಪುತ್ರ ಇಬ್ಬರೂ ಗಾಯಗೊಂಡಿದ್ದಾರೆ ಎನ್ನುವ ಸುದ್ದಿಯೇ ಅವಳಿಗೆ ಬರಸಿಡಿಲು ಬಡಿದಂತಾಗಿದ್ದು, ಅದಕ್ಕಾಗಿಯೇ ಗಾಬರಿಯಲ್ಲಿ ಎದ್ದು, ಬಿದ್ದು ಆಸ್ಪತ್ರೆಗೆ ಬಂದಿದ್ದಾರೆ. ಆರೋಗ್ಯದಲ್ಲಿ ಏರುಪೇರು ಆಗಿದ್ದು, ಮುಧೋಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಮ್ಮ ಬಳಿಗೆ ಬರುವ ಪ್ರತಿಯೊಬ್ಬರ ಮುಂದೆ ಇದೇ ವಿಷಯ ಮತ್ತೆ ಮತ್ತೆ ಹೇಳುತ್ತಲೇ ಮಗ, ಗಂಡ ಆರಾಮ ಅದಾರೇನ್ರೀ ಎಂದು ಆತಂಕದಲ್ಲಿ ಪ್ರಶ್ನೆ ಮಾಡುತ್ತಿದ್ದು, ಅಲ್ಲಿದ್ದವರಿಗೆ ಕರುಳು ಹಿಂಡಿದಂತಾಗುತ್ತಿದೆ. ಮಹಿಳೆಯ ಸ್ಥಿತಿ ಕಂಡು ‘ಛೇ ಹೀಗಾಗಬಾರದಿತ್ತು. ಥೂ ಪಾಪಿ ಜವರಾಯ’ ಅಂತ ಹಿಡಿಶಾಪ ಹಾಕುತ್ತಿದ್ದವರವರು ಅದೆಷ್ಟೋ?

ಆಸ್ಪತ್ರೆ ಹಾಸಿಗೆಯಲ್ಲಿ ತಾಯಿ ಜೀವ ಮಿಡಿಯುತ್ತಿದೆ. ಇತ್ತ ಜವರಾಯ ಮಾತ್ರ ಯಾವ ಸುಳಿವು ನೀಡದೇ ಆಕೆಯ ಗಂಡನ ಜೀವ ತೆಗೆದುಕೊಂಡಿದೆ. ಸಮಾಧಾನ ಎನ್ನುವಂತೆ ಪುತ್ರ ಮನೋಜ ಆರೋಗ್ಯವಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಸಚಿವ ಶಿವಾನಂದ ಪಾಟೀಲ ಭೇಟಿ:ಮುಧೋಳದ ನಿರಾಣಿ ಡಿಸ್ಟಿಲರಿ ಫ್ಯಾಕ್ಟರಿಯ ಇಟಿಪಿ ಘಟಕ ಸ್ಫೋಟ ದುರಂತ ಹಿನ್ನೆಲೆ ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭೇಟಿ ಸೋಮವಾರ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಮೈಸೂರು ಜಿಲ್ಲೆ ಹನೂರ ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮ ದೇವಾಲಯದ ಕಲಶಾರೋಹಣ ವೇಳೆ ವಿಷಾಹಾರ ಸೇವನೆ ಘಟನೆ ಆಸ್ಪತ್ರೆಗೆ ಭೇಟಿ ನೀಡಿದ್ದರು. ಬೆಂಗಳೂರಿಂದ ರಾತ್ರಿ ಹೊರಟು ಸೋಮವಾರ ಬೆಳಗ್ಗೆ ಬಾದಾಮಿ ತಾಲೂಕಿನ ಕುಳಲಿ ಗ್ರಾಮದಲ್ಲಿರವ ಕಾರ್ಖಾನೆಗೆ ಭೇಟಿ ನೀಡಿ ವೀಕ್ಷಣೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.