ಅಧ್ಯಾತ್ಮದ ಸಾಧಕ ಪವಾಡಗಳನ್ನು ಪ್ರದರ್ಶನಕ್ಕಿಡಲ್ಲ

ಮುದ್ದೇಬಿಹಾಳ/ನಾಲತವಾಡ: ವೀರೇಶ್ವರ ಶರಣರು 12ನೇ ಶತಮಾನದಲ್ಲಿ ಬದುಕಿದ್ದ ಶರಣ-ಶರಣೆಯರ ಹಾಗೆ ಕೂದಲೆಳೆಯಷ್ಟು ಏರುಪೇರು ಇಲ್ಲದಂತೆ ಆದರ್ಶವಾಗಿ ಬದುಕಿದ್ದಾರೆ. ನಿಜವಾದ ಅಧ್ಯಾತ್ಮದ ಸಾಧಕ ಪವಾಡಗಳನ್ನು ಪ್ರದರ್ಶನಕ್ಕಿಡುವುದಿಲ್ಲ. ಅಂತಹ ಪವಾಡಗಳನ್ನು ಮಾಡಿ ಅಧ್ಯಾತ್ಮದ ಸಿದ್ಧಿಯ ಶಿಖರದಲ್ಲಿ ಇದ್ದವರು ವೀರೇಶ್ವರ ಶರಣರು ಎಂದು ಹುಬ್ಬಳಿ-ಹಾನಗಲ್ಲ ಮೂರು ಸಾವಿರಮಠದ ಗುರುಸಿದ್ಧರಾಜಯೋಗೇಂದ್ರ ಶ್ರೀಗಳು ಹೇಳಿದರು.

ನಾಲತವಾಡ ಪಟ್ಟಣದ ಶ್ರೀ ವೀರೇಶ್ವರ ಶಿಕ್ಷಣ ಮಹಾವಿದ್ಯಾಲಯ ಆವರಣದ ಹಾನಗಲ್ಲ ಗುರುಕುಮಾರೇಶ್ವರ ವೇದಿಕೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೀರೇಶ್ವರ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಲಿಂಗಾಯತರಿಗೆ ಯಜ್ಞ ಯಾಗಾದಿಗಳನ್ನು ಶರಣರು ವಿರೋಧಿಸಿದ್ದಾರೆ. ಯಾರು ಲಿಂಗಾಯತ ಧರ್ಮ ಒಪ್ಪಿಕೊಂಡಿದ್ದಾರೆಯೋ ಅವರು ಯಜ್ಞ, ಯಾಗಾದಿಗಳನ್ನು ಮಾಡುವುದಿಲ್ಲ. ವೀರೇಶ್ವರ ಶರಣರಿಗೆ ವಾಕ್ ಸಿದ್ಧಿಯಾಗಿತ್ತು, ಅವರೊಬ್ಬ ಧರ್ಮನಿಷ್ಠರು,ತ್ರಿಕಾಲಜ್ಞಾನಿಯಾಗಿದ್ದರು ಎಂದರು.

ವೀರೇಶ್ವರ ಹಾಕುತ್ತಿರುವ ಬಟ್ಟೆಯಲ್ಲಿ 50 ತೇಪೆಗಳಿದ್ದವು. ಅವರು ಹೊದೆಯುತ್ತಿದ್ದ ಕಂಬಳಿ ಹಾಗೂ ಇನ್ನಿತರ ವಸ್ತುಗಳನ್ನು ಪವಿತ್ರ ವಸ್ತುಗಳ ರೀತಿಯಲ್ಲಿ ಶಿವಯೋಗಮಂದಿರದಲ್ಲಿ ಪೂಜೆಯಾಗುತ್ತಿದೆ. ವಚನ ಸಾಹಿತ್ಯದ ಶಿವಾನುಭವ ನಡೆದ ತನ್ಮಯತೆ ಒಳಗೊಂಡಿದೆ ಎಂದರು.

ಹಾನಗಲ್ಲ ಶರಣರಿಗೂ ವೀರೇಶ್ವರ ಶರಣರಿಗೂ ಅನೋನ್ಯ ಸಂಬಂಧ. ಹಾನಗಲ್ಲ ಕುಮಾರೇಶ್ವರರು ತಮ್ಮ ಜೀವನದಲ್ಲೇ ಪಾದೋದಕವನ್ನು ಯಾರಿಗೂ ಕೊಟ್ಟಿರಲಿಲ್ಲ. ಆದರೆ, ವೀರೇಶ್ವರ ಶರಣರಿಗೆ ಮಾತ್ರ ಕೊಟ್ಟಿದ್ದರು. ಬಂಡಾಯ ಸಾಹಿತಿಗಳು ಪವಾಡಗಳು ಸುಳ್ಳು ಎನ್ನುತ್ತಾರೆ. ಆದರೆ, ಅಧ್ಯಾತ್ಮಕ್ಕೆ 10 ಸಾವಿರ ವರ್ಷಗಳ ಇತಿಹಾಸವಿದೆ ಎಂದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ ವಿವಿಧ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಶಿಕ್ಷಣ ಸಂಸ್ಥೆಯ ಪ್ರಯೋಜನ ಪಡೆದುಕೊಳ್ಳಬೇಕು. ದಲಿತ ವ್ಯಕ್ತಿಗೆ ಆಶ್ರಯ ಕೊಟ್ಟಿರುವ ಮುಧೋಳದ ಮಠವಾಗಿದೆ. ನಾನು ಈ ಎತ್ತರಕ್ಕೆ ಬೆಳೆಯಲು ಲಿಂಗಾಯತ ಮಠದಿಂದ ದೊರೆತ ಸಂಸ್ಕಾರ ಕಾರಣವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮಧುರಖಂಡಿಯ ಬಸವಜ್ಞಾನ ಗುರುಕುಲದ ಪ್ರವಚನಕಾರ ಡಾ. ಈಶ್ವರ ಮಂಟೂರ, ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಮಾತನಾಡಿದರು. ನಿಡಸೋಸಿ ಸಿದ್ದಸಂಸ್ಥಾನಮಠದ ಪಂಚಮಶಿವಲಿಂಗೇಶ್ವರ ಶ್ರೀಗಳು, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು, ಯರನಾಳ ವಿರಕ್ತಮಠದ ಸಂಗನಬಸವ ಶ್ರೀಗಳು, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಮಾಡಗಿ, ನಿವೃತ್ತ ಶಿಕ್ಷಕ ಲ.ರು. ಗೊಳಸಂಗಿ ಇದ್ದರು.

ವೀರೇಶ್ವರ ವಿದ್ಯಾವರ್ಧಕ ಸಂಘದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಎಂ.ಬಿ. ಅಂಗಡಿ ಸ್ವಾಗತಿಸಿದರು. ಎಂ.ಎಸ್. ಪಾಟೀಲ ವರದಿ ವಾಚಿಸಿದರು. ರಾಘವೇಂದ್ರ ಗೂಳಿ ಹಾಗೂ ರಾಜು ಹಾದಿಮನಿ ನಿರೂಪಿಸಿದರು.

ಜನಪ್ರತಿನಿಧಿಗಳ ಗೈರು
ಶರಣ ವೀರೇಶ್ವರ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ, ಹಂಪಿ ವಿಶ್ವವಿದ್ಯಾಲಯದ ಕುಲಪತಿ ಡಾ. ಮಲ್ಲಿಕಾ ಘಂಟಿ ಸೇರಿದಂತೆ ಜನಪ್ರತಿನಿಧಿಗಳು ಗೈರು ಉಳಿದಿದ್ದರು.