ಸರ್ಕಾರಕ್ಕೆ 66.78 ಕೋಟಿ ರೂ ಮರು ಪ್ರಸ್ತಾವನೆ ಸಲ್ಲಿಕೆ

ಮುದ್ದೇಬಿಹಾಳ : ಪಟ್ಟಣದ ಕುಡಿವ ನೀರು ಮತ್ತು ಒಳಚರಂಡಿ ಯೋಜನೆಗೆ ಈ ಹಿಂದಿನ ಸರ್ಕಾರದಲ್ಲಿ 38.59 ಕೋಟಿ ರೂ. ಮಂಜೂರಾಗಿತ್ತು. ಅಷ್ಟು ಹಣ ಯುಜಿಡಿ ಕಾಮಗಾರಿಗೆ ಸಾಲುತ್ತಿಲ್ಲ. ಈ ಹಿನ್ನೆಲೆ ಯೋಜನಾ ವೆಚ್ಚ ಹೆಚ್ಚಳವಾಗಿದ್ದು 66.78 ಕೋಟಿ ರೂ.ಗಳಿಗೆ ಮರುಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ಮಾರುತಿ ನಗರದಲ್ಲಿ ಯುಜಿಡಿ ಕಾಮಗಾರಿ ವೇಳೆ ಹಾಳಾದ ರಸ್ತೆಗಳ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ನಿವಾಸಿ ದೋರನಳ್ಳಿ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಯುಜಿಡಿ ಕಾಮಗಾರಿಯಡಿ 15-16 ಕಿಮೀ ರಸ್ತೆ ಹಾಳಾಗಿದೆ. ಸದ್ಯಕ್ಕೆ 5.7 ಕಿಮೀ ವ್ಯಾಪ್ತಿಯ ಸುಧಾರಣೆಗೆ ಅಗತ್ಯ ಅನುದಾನ ಲಭ್ಯವಿದ್ದು, ಕೆಲಸ ಆರಂಭಿಸಲಾಗುತ್ತಿದೆ. ಮಳೆಗಾಲ ಆರಂಭಗೊಳ್ಳುವಷ್ಟರಲ್ಲೇ ರಸ್ತೆ ಸುಧಾರಣೆ ಪೂರ್ಣಗೊಳಿಸಲಾಗುತ್ತದೆ ಎಂದರು.

ಈ ಸರ್ಕಾರ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಕುಡಿವ ನೀರಿಗೆ ಅನುದಾನ ಕೊಡುವಂತೆ ಕೇಳಿದ್ದರೂ ಹಣ ಇಲ್ಲವೆಂಬ ಮಾತು ಹೇಳುತ್ತಿದ್ದಾರೆ. ಅದೇ ಸಿಂದಗಿ ಮತಕ್ಷೇತ್ರಕ್ಕೆ 96 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಆಡಳಿತ ಪಕ್ಷದಲ್ಲಿರುವ ಶಾಸಕರಿಗೆ ಹೆಚ್ಚು ಹಣ ಕೊಡುತ್ತಿದ್ದು, ವಿರೋಧ ಪಕ್ಷದ ಶಾಸಕರಿರುವ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮುಂದುವರಿಸದ್ದಾರೆ. ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಅನುಮೋದನೆ ಕೊಡುತ್ತಿಲ್ಲ ಎಂದು ದೂರಿದರು.

27 ಪ್ರಶ್ನೆಗಳನ್ನು ವಿಧಾನಸಭೆಯಲ್ಲಿ ಕೇಳಿದ್ದು ಅದರಲ್ಲಿ 7 ಪ್ರಶ್ನೆಗಳು ಯುಜಿಡಿ ಕಾಮಗಾರಿಗೆ ಸಂಬಂಧಿಸಿದ್ದಾಗಿವೆ. ಮೂಲಸೌಕರ‌್ಯ ಕಲ್ಪಿಸಲು ಅನುದಾನ ಕೊಡುವ ವಿಷಯದಲ್ಲಿ ತಾರತಮ್ಯ ಮಾಡುವ ನಿಮಗೆ ಮಾನ ಮರ್ಯಾದೆ ಇಲ್ಲವಾಗಿದೆ ಎಂದು ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದರು.

ಹಳೇ ತರಕಾರಿ ಕಟ್ಟಡ ತೆರವುಗೊಳಿಸಿ ಹೊಸ ತರಕಾರಿ ಕಟ್ಟಡ ಕಟ್ಟುವುದಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು. ನಗರದಲ್ಲಿ ಸ್ವಚ್ಛತೆ ಕಾಪಾಡಲು ವಿಶೇಷ ಅಭಿಯಾನವನ್ನು ಪುರಸಭೆ ಸದಸ್ಯರೊಂದಿಗೆ ಸೇರಿ ನಡೆಸುತ್ತೇನೆ. ಸಾರ್ವಜನಿಕರ ಹಿತದೃಷ್ಟಿಯ ಕೆಲಸಕ್ಕೆ ಬೇರೆಯವರ ಮಾತು ಕೇಳಿಕೊಂಡು ಅಪಪ್ರಚಾರ ನಡೆಸಿ ಅಡ್ಡಿಪಡಿಸಿದರೆ ಕಾನೂನು ಕ್ರಮಕ್ಕೆ ಮುಂದಾಗಿ ಕೆಲಸ ಮಾಡುವುದು ಅನಿರ್ಯಾವಾಗುತ್ತದೆ ಎಂದು ಶಾಸಕರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪುರಸಭೆ ಸದಸ್ಯರಾದ ಸದಾಶಿವ ಮಾಗಿ, ಬಸವರಾಜ ಮುರಾಳ, ಸಂಗಮ್ಮ ದೇವರಳ್ಳಿ, ಸಹಾನ ವಿಜಯಕುಮಾರ ಬಡಿಗೇರ, ಮಾಜಿ ಸದಸ್ಯ ಮನೋಹರ ತುಪ್ಪದ ಮತ್ತಿತರಿದ್ದರು.

ಮಾಜಿ ಶಾಸಕರ ಬಗ್ಗೆ ಕೇಳಬೇಡಿ
ಮಾಜಿ ಶಾಸಕರ ಬಗ್ಗೆ ಏನೂ ಪ್ರಶ್ನೆ ಕೇಳಬೇಡಿ. ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಮಂಜೂರಿ ಮಾಡಿಕೊಂಡು ಬಂದ ಯೋಜನೆಗಳಿಗೆ ಸ್ವಾಗತ. ಡಿಪಿಎಆರ್‌ನಲ್ಲಿ ದೊರೆತಿರುವ ಅಂಕಿ ಸಂಖ್ಯೆ ತಮ್ಮೆದರು ಹೇಳಿದ್ದೇನೆ. ಇದಕ್ಕಿಂತ ಹೆಚ್ಚಿಗೆ ನನಗೇನೂ ಗೊತ್ತಿಲ್ಲ ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಶಾಸಕರು ಉತ್ತರಿಸಿದರು.

ಪಟ್ಟಣದ ನಾಗರಿಕರಿಗೆ ಮೂಲಸೌಕರ‌್ಯ ಕಲ್ಪಿಸುವಲ್ಲಿ ಸರ್ಕಾರ ಹಿಂದೇಟು ಹಾಕಿದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಬೇಕಾಗುತ್ತದೆ.
ಎ.ಎಸ್. ಪಾಟೀಲ ನಡಹಳ್ಳಿ, ಶಾಸಕ