ಗುತ್ತಿಗೆದಾರರ ಕಾರ್ಯವೈಖರಿಗೆ ವ್ಯಾಪಾರಸ್ಥರ ಆಕ್ರೋಶ

ಮುದ್ದೇಬಿಹಾಳ: ಪಟ್ಟಣದ ಮುಖ್ಯರಸ್ತೆಯಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಂಡ ಬಳಿಕ ಅಗೆದಿದ್ದ ರಸ್ತೆಯನ್ನು ಸರಿಪಡಿಸುವ ಕೆಲಸ ಮಾಡಬೇಕಿದ್ದ ಗುತ್ತಿಗೆದಾರರು ರಸ್ತೆ ಮಧ್ಯೆ ಕಡಿ ಚೆಲ್ಲಿ ಅದಕ್ಕೆ ಡಾಂಬರೀಕರಣ ಮಾಡದೇ ಬಿಟ್ಟಿದ್ದು ಕಳೆದ ನಾಲ್ಕೈದು ದಿನಗಳಿಂದ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಯುಜಿಡಿ ಕಾಮಗಾರಿ ನಿರ್ಮಿಸಿದ ಬಳಿಕ ರಸ್ತೆ ಸುಧಾರಿಸಬೇಕಿದ್ದ ಗುತ್ತಿಗೆದಾರರು ತ್ವರಿತವಾಗಿ ಕೆಲಸ ಆರಂಭಿಸಿಲ್ಲ. ಅದಕ್ಕೆ ಮುಖ್ಯರಸ್ತೆಯೂ ಹೊರತಾಗಿಲ್ಲ. ನಿತ್ಯ ಮುಖ್ಯರಸ್ತೆಯಲ್ಲಿ ಒಂದಿಲ್ಲೊಂದು ಅಪಘಾತಗಳು ಆಗುತ್ತಿವೆ.ಇದರಿಂದ ಜನರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಯುಜಿಡಿ ಚೇಂಬರ್ ಮಾಡಿದ ಬಳಿಕ ಇಲ್ಲಿ ರಸ್ತೆಯನ್ನು ಸುಧಾರಣೆ ಮಾಡಬೇಕಿತ್ತು. ನಾಲ್ಕೈದು ದಿನಗಳಿಂದ ಒಣ ಕಡಿ (ಕಪ್ಪು ಜಲ್ಲಿಕಲ್ಲು) ಸುರುವಿ ಹೋಗಿದ್ದು ದ್ವಿಚಕ್ರ ವಾಹನಗಳು, ಕಾರಗಳು ಓಡಾಡುವಾಗ ಪುಟಿದು ಅಂಗಡಿಯೊಳಕ್ಕೆ ಬರುತ್ತಿವೆ.ಇದರಿಂದ ಯಾವಾಗ ಏನಾಗುವುದೋ ಎಂಬ ಭಯ ಆವರಿಸಿದೆ ಎಂದು ವರ್ತಕರಾದ ನಿಂಗಣ್ಣ ಚಟ್ಟೇರ, ಮಹಾಂತೇಶ ಕಡಿಬಾಗಿಲ ಹೇಳುತ್ತಾರೆ.

ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ ಹೇಗೆ ? ವ್ಯಾಪಾರಸ್ಥರಿಗೆ, ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಎಂದರೂ ಸುಮ್ಮನಿರುವುದನ್ನು ನೋಡಿದರೆ ಇವರು ಜನರ ಜೀವದ ಜತೆ ಚೆಲ್ಲಾಟ ಆಡುತ್ತಿದ್ದಾರೆಯೇ ಎಂದು ಖಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲು ಡಾಂಬರ್ ಹಾಕಿ ಈ ರಸ್ತೆ ಸುಧಾರಿಸಿ ಜನತೆಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಇಂಜಿನಿಯರ್ ಆರ್.ಜಿ. ರಾಠೋಡ, ಗುತ್ತಿಗೆದಾರರನ್ನು ಸಂಪರ್ಕಿಸಲಾಗಿ ಕಡಿ ಹಾಕಿ ಡಾಂಬರೀಕರಣ ಮಾಡಬೇಕೆಂದರೆ ಡಾಂಬರ್ ಲಭ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ನೆಪ ಹೇಳದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ರೋಡ್ ಸರಿಪಡಿಸಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದ್ದಾರೆ.

ಡಾಂಬರ್ ಸಿಗ್ತಿಲ್ವಂತೆ ..!
ಕೋಟ್ಯಂತರ ರೂ.ಮೊತ್ತದ ಒಳಚರಂಡಿ ಯೋಜನೆ ಗುತ್ತಿಗೆ ಹಿಡಿದಿರುವ ಗುತ್ತಿಗೆದಾರರಿಗೆ ಡಾಂಬರ್ ಲಭ್ಯವಾಗುತ್ತಿಲ್ಲವೆಂದು ಸ್ವತಃ ಇಂಜಿನಿಯರ್ ರಾಠೋಡ ಹೇಳುತ್ತಿದ್ದಾರೆ. ಇಂತಹ ಕುಂಟು ನೆಪ ಹೇಳುತ್ತಿರುವುದನ್ನು ನೋಡಿದರೆ ಸಾರ್ವಜನಿಕರಿಗೆ ಉದ್ದೇಶಪೂರ್ವಕವಾಗಿಯೇ ತೊಂದರೆ ಕೊಡುವ ಇರಾದೆಯನ್ನು ಗುತ್ತಿಗೆದಾರರು, ಅಧಿಕಾರಿಗಳು ಹೊಂದಿದ್ದಾರೆಯೇ ಎಂಬ ಪ್ರಶ್ನೆಯನ್ನು ವ್ಯಾಪಾರಸ್ಥರು,ಸಾರ್ವಜನಿಕರು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *