ಆರ್‌ಟಿಇ ಕಾಯ್ದೆ ಬದಲಾವಣೆ ಸಲ್ಲ

ಮುದ್ದೇಬಿಹಾಳ: ಕಡ್ಡಾಯ ಶಿಕ್ಷಣ ಕಾಯ್ದೆ (ಆರ್‌ಟಿಇ) ಯಲ್ಲಿನ ನಿಯಮಗಳನ್ನು ಬದಲಾಯಿಸಬಾರದು ಎಂದು ಆಗ್ರಹಿಸಿ ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಕರು, ಸಾರ್ವಜನಿಕರು ತಹಸೀಲ್ದಾರ್ ಕಚೇರಿ ಶಿರಸ್ತೆದಾರ್ ಮೂಲಕ ಸಿಎಂಗೆ ಸೋಮವಾರ ಮನವಿ ಸಲ್ಲಿಸಿದರು.

ಪಾಲಕರ ಪ್ರತಿನಿಧಿಗಳಾಗಿ ಬಿ.ಎಸ್. ಬಡಿಗೇರ, ಆರ್.ಎಂ. ಬಿರಾದಾರ, ಸಂಗೀತಾ ಮುಳಗೆ ಮತ್ತಿತರರು ಮಾತನಾಡಿ, ಆರ್‌ಟಿಇ ಮೂಲಕ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಬಡ, ಮಧ್ಯಮ ವರ್ಗದ ಮಕ್ಕಳು ಕಲಿಯಲು ಶೇ.25ರಷ್ಟು ಸೀಟುಗಳು ಉಚಿತವಾಗಿ ದೊರೆಯುತ್ತಿವೆ. ಆದರೆ ಸರ್ಕಾರ 2019-20ನೇ ಸಾಲಿನಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಈ ಯೋಜನೆಯ ಪ್ರಯೋಜನ ದೊರೆಯದಂತೆ ನಿಯಮಗಳನ್ನು ರೂಪಿಸಿರುವುದು ಸರಿಯಲ್ಲ. ಸರ್ಕಾರ ಲಕ್ಷಾಂತರ ರೂ. ಶುಲ್ಕ ವಸೂಲಿ ಮಾಡುವ ಶಾಲೆಗಳ ಒತ್ತಡಕ್ಕೆ ಮಣಿದು ಆರ್‌ಟಿಇ ನಿಯಮಗಳನ್ನು ಬದಲಿಸಿ ಬಡವರಿಗೆ ಅನ್ಯಾಯ ಮಾಡಿದೆ. ಕೂಡಲೇ ಹಿಂದಿನ ಕಾಯ್ದೆಯ ನಿಯಮಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಎಂ.ವಿ. ಉಪ್ಪಾರ, ಎಸ್.ಆರ್. ರಾಠೋಡ, ಶಂಕ್ರಮ್ಮ ಪಿ.ಬಿ., ಆರ್.ಎಚ್. ಬಾಗವಾನ, ಆರ್.ಎಚ್. ಚವಾಣ್, ಎಸ್.ಆರ್. ಪಾಟೀಲ, ಬಿ.ಸಿ. ಬಿಜಾಪುರ, ಜಿ.ಎಸ್. ಅಮಲ್ಯಾಳ, ಜಿ.ಪಿ. ಬಡಿಗೇರ, ಕೆ.ಎ. ನದಾಫ್, ಎ.ಎಲ್. ಪವಾರ ಮತ್ತಿತರರು ಇದ್ದರು.