ಬೇಡಜಂಗಮ ಎಸ್.ಸಿ. ಪ್ರಮಾಣಪತ್ರ ವಿತರಣೆಗೆ ಒತ್ತಾಯ

ಮುದ್ದೇಬಿಹಾಳ: ಜಂಗಮ ಸಮಾಜಕ್ಕೆ ನ್ಯಾಯಬದ್ಧವಾಗಿ ದೊರೆಯಬೇಕಾದ ಬೇಡಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ರಾಜ್ಯದ ಎಲ್ಲ ತಾಲೂಕು ಕೇಂದ್ರಗಳ ತಹಸೀಲ್ದಾರ್‌ರು ಸಮಾಜ ಬಾಂಧವರಿಗೆ ನೀಡುವ ಆದೇಶ ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ಮಾ.8 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ವೀರಮಹೇಶ್ವರ ತರುಣ ಸಂಘದ ಅಧ್ಯಕ್ಷ ಗೌರಿಶಂಕರ ಪುರಾಣಿಕಮಠ ಹೇಳಿದರು.

ಅಖಿಲ ಕರ್ನಾಟಕ ಬೇಡಜಂಗಮ ಸಮಾಜ ಸಂಸ್ಥೆ ನೇತೃತ್ವ, ಕೊಳದಮಠದ ಡಾ. ಶಾಂತವೀರ ಶ್ರೀಗಳ ಸಾನ್ನಿಧ್ಯದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಸ್ವಾತಂತ್ರೃಪೂರ್ವದಲ್ಲಿ 1921ರ ಡಿಪ್ರೇಸ್ಡ್ ಕ್ಲಾಸ್ ಪಟ್ಟಿಯಲ್ಲಿ ಜಂಗಮರನ್ನು ಸೇರಿಸಿ ಮೀಸಲಾತಿ ನೀಡಿದ್ದರು. ಸ್ವಾತಂತ್ರೃದವರೆಗೂ ಮುಂದುವರಿದ ಪರಿಶಿಷ್ಟ ಜಾತಿ ಮೀಸಲಾತಿ, ಸ್ವಾತಂತ್ರೃ ನಂತರವೂ ಮುಂದುವರಿದಿದೆ. ಸಂವಿಧಾನದ ಅನುಸೂಚಿತ ಜಾತಿಗಳ ಆದೇಶ 1950 ಜಂಗಮರು ಕಾಯಕ ಜೀವಿಗಳು, ಕಾಯಕ ಮಾಡಿ ಜೀವನೋಪಾಯಕ್ಕಾಗಿ ಬೇಡುವವರಾಗಿರುವು ದರಿಂದ ಜಂಗಮ ಪದ ತೆಗೆದು ಬೇಡಜಂಗಮ ಪದ ಸೇರಿಸಿದ್ದಾರೆ. ವೀರಶೈವ ಜಂಗಮರೇ ಬೇಡಜಂಗಮರೆನ್ನುವ ದಾಖಲೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖಂಡ ದಾನಯ್ಯ ಹಿರೇಮಠ, ಗುರುಪಾದ ಸಾಲಿಮಠ ಮಾತನಾಡಿ, ಹೈದರಾಬಾದ್ ಕರ್ನಾಟಕಕ್ಕೆ ಸೀಮಿತವಾದ ಈ ಸೌಲಭ್ಯದ ಕ್ಷೇತ್ರ ನಿರ್ಬಂಧ ತೆಗೆದುಹಾಕಿ ರಾಜ್ಯಾದ್ಯಂತ ವಿಸ್ತರಿಸಿದೆ. ಪರಿಶಿಷ್ಟ ಜಾತಿಗಳ ಪಟ್ಟಿಯ ಕ್ರಮಸಂಖ್ಯೆ 19ರಲ್ಲಿರುವ ಬೇಡಜಂಗಮರೆ ಕರ್ನಾಟಕ ರಾಜ್ಯದಲ್ಲಿರುವ ವೀರಶೈವ ಜಂಗಮರು. ಸಂವಿಧಾನ ಅನುಸೂಚಿತ ಜಾತಿಗಳ ಆದೇಶ 1950ರಲ್ಲಿ ಜಂಗಮರನ್ನೇ ಬೇಡಜಂಗಮರೆಂದು ಸೇರಿಸಿದ್ದರಿಂದ ಜಂಗಮ ಪದದ ಅಸ್ತಿತ್ವ ಇಲ್ಲವಾಗಿದೆ. ನಮ್ಮ ಸಮಾಜದ ಅಸ್ತಿತ್ವ ಇರುವುದೆ ಬೇಡಜಂಗಮರಾಗಿ. ಆದರೆ, ಸರ್ಕಾರ ಜಂಗಮರನ್ನು ಬೇಡಜಂಗಮರೆಂದು ಒಪ್ಪಿಕೊಳ್ಳುತ್ತಿಲ್ಲ. ಆದರೆ, ಬೇಡಜಂಗಮರೆಂದು ಎಸ್‌ಸಿಗೆ ಸೇರಿಸಿದ್ದರಿಂದ ಎಲ್.ಜಿ. ಹಾವನೂರ ತಮ್ಮ ವರದಿಯಲ್ಲಿ ಜಂಗಮರನ್ನು ಸೇರಿಸಿಲ್ಲ ಎಂಬ ಸತ್ಯವನ್ನು ಸರ್ಕಾರ ಉದ್ದೇಶಪೂರ್ವಕವಾಗಿ ಮರೆಮಾಚುತ್ತಿದೆ ಎಂದು ಆರೋಪಿಸಿದರು.

ಬೇಡಜಂಗಮ ಪ್ರಮಾಣಪತ್ರ ಜಾರಿ, ಶಾಸನಬದ್ಧ ಬೇಡಜಂಗಮ ಅಭಿವೃದ್ಧಿ ನಿಗಮ ರಚನೆ ಹಾಗೂ ಜಗದ್ಗುರು ರೇಣುಕಾದಿಪಂಚಾಚಾರ್ಯರ ಜಯಂತ್ಯುತ್ಸವವನ್ನು ಪ್ರತಿವರ್ಷ ಯುಗಾದಿಯಂದು ರಜಾರಹಿತವಾಗಿ ಆಚರಿಸಬೇಕೆನ್ನುವ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದೆಂದು ತಿಳಿಸಿದರು.

ಸಮಾಜದ ಮುಖಂಡರಾದ ಅರವಿಂದ ಲದ್ದಿಮಠ, ಮಹಾಂತೇಶ ಬೂದಿಹಾಳಮಠ, ವೀರೇಶ ಗುರುಮಠ, ಗುರಯ್ಯ ಮುದ್ನೂರಮಠ, ಸದಾಶಿವ ಘನಕುಮಾರಮಠ, ಶಿವಾನಂದ ಹಿರೇಮಠ ಮತ್ತಿತರರಿದ್ದರು.

ಮಾ.8 ರಂದು ಮುದ್ದೇಬಿಹಾಳದ ವಿಬಿಸಿ ಹೈಸ್ಕೂಲ್ ಮೈದಾನದಿಂದ ಸಂಜೆ 4 ಗಂಟೆಗೆ ಬೆಂಗಳೂರಿಗೆ ತೆರಳಲಾಗುವುದು. ಆಸಕ್ತ ಸಮಾಜದ ಬಾಂಧವರು ಸ್ವಂತ ಖರ್ಚಿನಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಸಮಾಜದ ಮುಖಂಡರು ಮನವಿ ಮಾಡಿದರು. ಮಾಹಿತಿಗೆ 9481574387, 9945805255, 9036394061 ಸಂಪರ್ಕಿಸಬಹುದು.