ಹನ್ನೆರಡು ಜನ ಪೊಲೀಸ್ ವಶಕ್ಕೆ

ಮುದ್ದೇಬಿಹಾಳ: ತಾಲೂಕಿನ ನೇಬಗೇರಿ ತಾಂಡಾದಲ್ಲಿ ಜಾಗ ವಿವಾದ ಕುರಿತು ಎರಡು ಗುಂಪುಗಳ ಮಧ್ಯೆ ಭಾನುವಾರ ರಾತ್ರಿ ನಡೆದ ಘರ್ಷಣೆಯಿಂದ 16ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಹನ್ನೆರಡು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಂಡಾಗೆ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಿದ್ದು, ಸದ್ಯಕ್ಕೆ ಪರಿಸ್ಥಿತಿ ಸಹಜ ಸ್ಥಿತಿಯತ್ತ ಸಾಗಿದೆ. ತಾಂಡಾಕ್ಕೆ ಪಿಎಸ್‌ಐ ಸಂಜಯ್ಯ ತಿಪ್ಪರೆಡ್ಡಿ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರು ಪಿಎಸ್‌ಐ, ಐವರು ಪೊಲೀಸ್ ಸಿಬ್ಬಂದಿ ಹಾಗೂ ಒಂದು ಮೀಸಲು ಪೊಲೀಸ್ ಪಡೆ (ಡಿಆರ್‌ಎಫ್) ನಿಯೋಜಿಸಲಾಗಿದೆ ಎಂದು ಸಿಪಿಐ ರವಿಕುಮಾರ ಕಪ್ಪತ್ತನವರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಐ, ನೇಬರಗಿ ಗ್ರಾಮದಲ್ಲಿ ಶಿವಾನಂದ ನಾಯಕ ಎಂಬುವರ ಕುಟುಂಬವಿದ್ದು ಅವರಿಗೆ ಸೇರಿದೆ ಎನ್ನಲಾದ 4 ಪ್ಲಾಟ್ ಪಂಚಾಯಿತಿ ಸರ್ವೆ ಸಂಖ್ಯೆ 9 ರಲ್ಲಿ ನಮೂದಾಗಿದೆ. ಮತ್ತೊಂದು ಗುಂಪಿನವರು ಆರ್‌ಟಿಒ ಅಧಿಕಾರಿ ಜಯರಾಂ ನಾಯಕ ಅವರಿಗೆ ಪ್ಲಾಟ್‌ಗಳು ಸೇರಿವೆ ಎಂದು ಹೇಳುತ್ತಿದ್ದಾರೆ. ಆದರೆ ಅದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಇಲ್ಲಿಯವರೆಗೆ ಪೂರೈಸಿಲ್ಲ. ಕಳೆದ ಮೂರು ತಿಂಗಳ ಹಿಂದೆ ವಿವಾದಿತ ಸ್ಥಳದಲ್ಲಿ ಕೆಲವರು ದುರ್ಗಾದೇವಿ ದೇವಸ್ಥಾನ ನಿರ್ಮಿಸಲು ಕೆಲಸ ಆರಂಭಿಸಿದ್ದರು. ಅಂದಿನಿಂದಲೇ ಜಾಗದ ಬಗ್ಗೆ ವಿವಾದ ಉಂಟಾಗಿದ್ದು, ಎರಡೂ ಬಣಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಹಿಂದೆ ನಡೆದ ಜಗಳದಲ್ಲಿ ಭಾಗಿಯಾಗಿದ್ದ ಕೆಲವರಿಂದ ವೈಯಕ್ತಿಕ ಬಾಂಡ್‌ಗಳನ್ನು ಬರೆಸಿಕೊಂಡಿದ್ದರೂ ಮತ್ತೆ ಜಗಳವಾಡಿದ್ದಾರೆ ಎಂದು ತಿಳಿಸಿದರು.

ಘಟನೆಯಲ್ಲಿ ಒಂದು ಬಣದ ವೆಂಕಟೇಶ ನಾಯಕ, ಅವಿನಾಶ ನಾಯಕ, ಶಿವಾನಂದ ನಾಯಕ ಸೇರಿ ಒಟ್ಟು 7 ಜನರಿಗೆ ಗಂಭೀರ ಗಾಯಗಳಾಗಿವೆ. ಇನ್ನೊಂದು ಗುಂಪಿನ ಅಣ್ಣಪ್ಪ ನಾಯಕ, ಕಾಂತು ನಾಯಕ, ರೇಷ್ಮಾ ಲಮಾಣಿ ಸೇರಿ ಒಟ್ಟು 9 ಜನರು ಗಾಯಗೊಂಡಿದ್ದಾರೆ. ತಾಂಡಾದಲ್ಲಿ ನಿಲ್ಲಿಸಿದ್ದ ಒಂದು ಕಾರು, ಎರಡು ಬೈಕ್‌ಗಳು ಹಾನಿಗೊಂಡಿವೆ. ಘಟನೆಗೆ ಸಂಬಂಧಿಸಿದಂತೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಅವಿನಾಶ ನಾಯಕ 52 ಜನರ ವಿರುದ್ಧ ದೂರು ಸಲ್ಲಿಸಿದ್ದು, ಭೀಮಸಿಂಗ ಲಮಾಣಿ 30 ಜನರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ಸಿಪಿಐ ತಿಳಿಸಿದರು.

Leave a Reply

Your email address will not be published. Required fields are marked *