ರಮೇಶ್​ ಜಿಗಜಿಣಗಿಗಿಂತಲೂ ಸಮರ್ಥ ಅಭ್ಯರ್ಥಿ ಯಾರಿದ್ದಾರೆ?

ಮುದ್ದೇಬಿಹಾಳ: ಐದು ಬಾರಿ ಸಂಸದರಾಗಿ, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಲ್ಲದೆ ರಾಜ್ಯದ ಗೃಹಮಂತ್ರಿ, ಕಂದಾಯ ಮಂತ್ರಿ ಹಾಗೂ ಕೇಂದ್ರ ಸಚಿವರಾಗಿ ಕೆಲಸ ಮಾಡಿದ ರಮೇಶ ಜಿಗಜಿಣಗಿ ಅವರಿಗಿಂತ ಸಮರ್ಥ ಅಭ್ಯರ್ಥಿ ಬಿಜೆಪಿಯಲ್ಲಿ ಯಾರಿದ್ದಾರೆ ? ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಪ್ರಶ್ನಿಸಿದರು.

ಪಟ್ಟಣದ ಗಣೇಶ ನಗರದ ಬಿಜೆಪಿ ಹಿರಿಯ ಮುಖಂಡ ಬಾಬುಲಾಲ್ ಓಸ್ವಾಲ್ ಮನೆ ಮೇಲೆ ಬಿಜೆಪಿ ಧ್ವಜ ಹಾರಿಸಿ ‘ಪ್ರತಿ ಮನೆ ಬಿಜೆಪಿ ಮನೆ’ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸದ್ಯಕ್ಕೆ ಬಿಜೆಪಿಯಲ್ಲಿ ಜಿಗಜಿಣಗಿ ಅವರನ್ನು ಬಿಟ್ಟು ಪ್ರಬಲರು ಇದ್ದರೆ ಹೈಕಮಾಂಡ್ ಭೇಟಿ ಆಗಲಿ. ನಮ್ಮದೇನು ಅಭ್ಯಂತರವಿಲ್ಲ.ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದರು.

ನಿರಂತರವಾಗಿ ಈ ಅಭಿಯಾನ ನಡೆಯಲಿದ್ದು ಮುದ್ದೇಬಿಹಾಳ, ತಾಳಿಕೋಟೆ ಹಾಗೂ ನಾಲತವಾಡಕ್ಕೆ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗುತ್ತದೆ. ಪ್ರತಿಯೊಂದು ಸಮಿತಿಯಲ್ಲಿ 10 ಜನ ಪಕ್ಷದ ಹಿರಿಯ ಸದಸ್ಯರು ಇರುತ್ತಾರೆ. ರಾಷ್ಟ್ರಕ್ಕೆ ಮೋದಿ ಅವರ ಅವಶ್ಯಕತೆ ಎಷ್ಟಿದೆ ಎಂಬುದನ್ನು ಪ್ರತಿಯೊಬ್ಬರಿಗೂ ತಿಳಿಸುವ ಕಾರ್ಯವನ್ನು ಈ ಅಭಿಯಾನದಲ್ಲಿ ಮಾಡುತ್ತೇವೆ ಎಂದು ಹೇಳಿದರು.

ಮುಖಂಡರಾದ ಬಾಬುಲಾಲ್ ಓಸ್ವಾಲ, ಮಲಕೇಂದ್ರಗೌಡ ಪಾಟೀಲ, ಬಿ.ಪಿ. ಕುಲಕರ್ಣಿ, ಪ್ರಭು ಕಡಿ, ಡಾ. ಎಸ್.ಬಿ. ವಡವಡಗಿ, ನ್ಯಾಯವಾದಿ ಬಿ.ಜಿ. ಜಗ್ಗಲ, ಪುರಸಭೆ ಸದಸ್ಯರಾದ ಸದಾಶಿವ ಮಾಗಿ, ಅಶೋಕ ವನಹಳ್ಳಿ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಮಾಜಿ ಸದಸ್ಯ ಶರಣಯ್ಯ ಬೂದಿಹಾಳಮಠ, ಮಾಣಿಕಚಂದ ದಂಡಾವತಿ, ಮೌನೇಶ ಪತ್ತಾರ, ಮನೋಹರ ತುಪ್ಪದ, ಜಗದೀಶ ಪಂಪಣ್ಣವರ, ವಿಕ್ರಂ ಓಸ್ವಾಲ, ಮಹೇಂದ್ರ ಓಸ್ವಾಲ, ಅಶೋಕ ರಾಠೋಡ, ರಾಜು ರಾಯಗೊಂಡ, ರವೀಂದ್ರ ಬಿರಾದಾರ, ಬಸವರಾಜ ನಂದಿಕೇಶ್ವರಮಠ ಇದ್ದರು.

60 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ಸಿಗರು ಮೋದಿ ಅವರ 5 ವರ್ಷ ಆಡಳಿತ ಲೆಕ್ಕ ಕೇಳುತ್ತಿದ್ದು ಮೊದಲು ತಮ್ಮ ಆತ್ಮಾವಲೋಕನ ಮಾಡಿಕೊಳ್ಳಲಿ. ಕೇಂದ್ರ ಸರ್ಕಾರ ಬಡವರು, ರೈತರು ಹಾಗೂ ಜನಸಾಮಾನ್ಯರ ಪರವಾಗಿ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದೆ.
– ಎ.ಎಸ್. ಪಾಟೀಲ ನಡಹಳ್ಳಿ ಶಾಸಕ