ತನಿಖಾಧಿಕಾರಿ ಎದುರು ರೈತರ ಹೇಳಿಕೆ ದಾಖಲು

ಮುದ್ದೇಬಿಹಾಳ: ತಾಲೂಕಿನ ಕೊಣ್ಣೂರ ಪಿಕೆಪಿಎಸ್‌ನಲ್ಲಿ 2013-14ನೇ ಸಾಲಿನಲ್ಲಿ ಬಿಡುಗಡೆಯಾದ ಆಲಿಕಲ್ಲು ಬೆಳೆ ಪರಿಹಾರ ವಿತರಣೆಯಲ್ಲಿ ಆಗಿರುವ ಅವ್ಯವಹಾರ ತನಿಖೆಯ ಮುಂದುವರಿದ ಭಾಗವಾಗಿ ನೇಮಕವಾಗಿರುವ ತನಿಖಾಧಿಕಾರಿ ಎಸ್.ಆರ್. ನಾಯಕ ರೈತರ ಹೇಳಿಕೆಗಳನ್ನು ಭಾನುವಾರ ಲಿಖಿತವಾಗಿ ದಾಖಲಿಸಿಕೊಂಡರು.

ತಾಲೂಕಿನ ಕೊಣ್ಣೂರ ಪಿಕೆಪಿಎಸ್‌ನಲ್ಲಿ 2013-14ನೇ ಸಾಲಿನಲ್ಲಿ ಬಿಡುಗಡೆಯಾದ ಆಲಿಕಲ್ಲು ಬಿದ್ದು ಹಾನಿಯಾದ ಬೆಳೆ ಪರಿಹಾರ ಧನದ ವಿತರಣೆಯಲ್ಲಿ 20.40 ಲಕ್ಷ ರೂ. ಗೋಲ್‌ಮಾಲ್ ಆಗಿದೆ. ಸತ್ತವರು, ಗುಳೇ ಹೋದವರ ಹೆಸರಿನಲ್ಲಿಯೂ ಪರಿಹಾರ ಧನದ ಮೊತ್ತ ನಮೂದಿಸಲಾಗಿದೆ. ಅಲ್ಲದೆ, ಜಿಪಂ ಸದಸ್ಯೆ ಜ್ಯೋತಿ ಅಸ್ಕಿ ಹಾಗೂ ಅವರ ಪತಿ ಡಾ.ಬಸವರಾಜ ಹೆಸರಿನಲ್ಲಿ ಫೋರ್ಜರಿ ಸಹಿ ಮಾಡಿ ಹಣ ಲಪಟಾಯಿಸಲಾಗಿದೆ. ಈ ಪ್ರಕರಣದ ತನಿಖೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಪ್ರಗತಿಪರ ರೈತ ಡಾ.ಬಸವರಾಜ ಅಸ್ಕಿ ನೇತೃತ್ವದಲ್ಲಿ ಮಾ.3 ಹಾಗೂ ಮಾ.14ರಂದು ರೈತರು ಲಿಖಿತ ಮನವಿ ಸಲ್ಲಿಸಿದ್ದರು.

ಮನವಿ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದ ಹಿಂದಿನ ಡಿಸಿ ವೈ. ಎಸ್. ಪಾಟೀಲ ತ್ವರಿತವಾಗಿ ಪ್ರಕರಣದ ತನಿಖೆ ನಡೆಸುವಂತೆ ಸಹಕಾರಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಈ ಹಿನ್ನೆಲೆ ಕೊಣ್ಣೂರ ಪಿಕೆಪಿಎಸ್‌ನಲ್ಲಿ ಭಾನುವಾರ ಪೊಲೀಸ್ ಭದ್ರತೆಯಲ್ಲಿ ರೈತರ ಹೇಳಿಕೆಯನ್ನು ವಿಡಿಯೋ ಚಿತ್ರೀಕರಣ ಸಮೇತ ದಾಖಲಿಸಿಕೊಳ್ಳಲಾಯಿತು.

ಸುದ್ದಿಗಾರರೊಂದಿಗೆ ಮಾತನಾಡಿದ ತನಿಖಾಧಿಕಾರಿ ಎಸ್.ಆರ್. ನಾಯಕ, ಕೊಣ್ಣೂರ ಪಿಕೆಪಿಎಸ್‌ನಲ್ಲಿ ಆಲಿಕಲ್ಲು ಬಿದ್ದು ಹಾನಿಯಾದ ಬೆಳೆ ಪರಿಹಾರಧನದ ವಿತರಣೆಯಲ್ಲಿ ಅವ್ಯವಹಾರವಾಗಿದೆ ಎಂದು ರೈತರು ದೂರು ಸಲ್ಲಿಸಿದ್ದಾರೆ. ಅವರ ದೂರು ಪರಿಗಣಿಸಿ ಯಾರಿಗೆ ಪರಿಹಾರ ದೊರೆತಿದೆ, ದೊರೆತಿಲ್ಲ ಎಂಬ ಬಗ್ಗೆ ಹೇಳಿಕೆ ಪಡೆದುಕೊಳ್ಳಲಾಗಿದೆ. ರೈತರು ನೀಡಿರುವ ಹೇಳಿಕೆಗಳಿಗೂ ಹಾಗೂ ಆಲಿಕಲ್ಲು ಪರಿಹಾರ ವಿತರಿಸಿದ ವೇಳೆ ಇದ್ದ ಮೊತ್ತ ತಾಳೆ ನೋಡಲಾಗುತ್ತದೆ. ಯಾವ ರೈತರು ಬೆಳೆ ಪರಿಹಾರ ಹಣ ಪಡೆದುಕೊಂಡಿದ್ದಾರೆಯೋ ಹಾಗೂ ಪಡೆದುಕೊಂಡಿಲ್ಲವೆಂದು ತಿಳಿಸಿದ್ದಾರೆಯೋ ಅವರಿಂದಲೂ ಹೇಳಿಕೆ ದಾಖಲಿಸಿಕೊಂಡಿದ್ದೇವೆ. ವರದಿಯನ್ನು ಒಂದು ವಾರದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಸಲ್ಲಿಸುತ್ತೇನೆ ಎಂದರು.

ಪ್ರಗತಿಪರ ರೈತ ಡಾ. ಬಸವರಾಜ ಅಸ್ಕಿ ಮಾತನಾಡಿ, ತನಿಖಾಧಿಕಾರಿಗಳು ರೈತರಿಂದ ಹೇಳಿಕೆ ಪಡೆದುಕೊಳ್ಳುವ ವೇಳೆ ನಿಮಗೆ ಪರಿಹಾರ ಬಂದಿದೆಯೋ ಇಲ್ಲವೋ ಎಂದು ಕೇವಲ ಎರಡೇ ಪ್ರಶ್ನೆ ಕೇಳಿದ್ದಾರೆ. ರೈತರಿಗೆ ಯಾವಾಗ ಪರಿಹಾರ ಬರಬೇಕಿತ್ತು? ಯಾವಾಗ ವಿತರಿಸಲಾಗಿದೆ ? ಅಲ್ಲದೆ, ಆಲಿಕಲ್ಲು ಬಿದ್ದು ಹಾನಿಯಾದ ಬೆಳೆಗೆ ಸಂಘದಲ್ಲಿ ಪರಿಹಾರ ಹಣ ಜಮೆ ಹಾಗೂ ಖರ್ಚು ಯಾವಾಗ ಹಾಕಿದ್ದಾರೆ ಎಂಬುದನ್ನು ವರದಿಯಲ್ಲಿ ದಾಖಲಿಸಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಒಟ್ಟು 40 ಜನರಿಗೆ ವಿತರಿಸಿದ್ದ ನೋಟಿಸ್ ಪೈಕಿ 28 ರೈತರು ಲಿಖಿತ ಹೇಳಿಕೆ ದಾಖಲಿಸಿದರು. ಕೆಲ ರೈತರಿಂದ ಒತ್ತಾಯಪೂರ್ವಕವಾಗಿ ಹೇಳಿಕೆ ಕೊಡಿಸುತ್ತಿರುವ ಸನ್ನಿವೇಶಗಳು ಸಂಘದ ಆವರಣದಲ್ಲಿ ಕಂಡು ಬಂದವು. ಸಿಬ್ಬಂದಿ ಶ್ರೀಶೈಲ ಹಂಗರಗಿ, ಪ್ರಭಾರ ಕಾರ್ಯದರ್ಶಿ ರವಿ ಮುಂದಿನಮನಿ ಇದ್ದರು.

ಪಿಎಸ್‌ಐ ಭೇಟಿ
ಕೊಣ್ಣೂರ ಪಿಕೆಪಿಎಸ್‌ನಲ್ಲಿ ತನಿಖೆ ಹಿನ್ನೆಲೆ ತಾಳಿಕೋಟೆ ಪೊಲೀಸ್ ಠಾಣೆಯಿಂದ ಹೆಚ್ಚಿನ ಬಿಗಿ ಬಂದೋಬಸ್ತ್ ವಹಿಸಲಾಗಿತ್ತು. ಪಿಎಸ್‌ಐ ಗೋವಿಂದಗೌಡ ಪಾಟೀಲ, ಎಎಸ್‌ಐ ಪಿ.ಆರ್. ಹಿಪ್ಪರಗಿ, ಸಿಬ್ಬಂದಿ ಎಸ್.ಎಸ್. ಹಾಳಗೋಡಿ, ಪಿ.ಎಂ. ಗಣತಿ ಮುಂಜಾಗ್ರತೆ ಕ್ರಮವಾಗಿ ಭದ್ರತೆ ವಹಿಸಿದ್ದರು.

Leave a Reply

Your email address will not be published. Required fields are marked *