ಹೊಕ್ರಾಣಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಮುದ್ದೇಬಿಹಾಳ: ಊರಿನ ಕೆರೆಯನ್ನು ಕಾಲುವೆ ಮೂಲಕ ನೀರು ಹರಿಸಿ ತುಂಬಿಸದಿದ್ದರೆ ಏ.23 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ ತಾಲೂಕಿನ ಹೊಕ್ರಾಣಿ ಗ್ರಾಮಸ್ಥರು ಘೋಷಿಸಿದ್ದಾರೆ.

ತಾಲೂಕಿನ ಹೊಕ್ರಾಣಿ ಗ್ರಾಮದ ಅಗಸಿ ಬಳಿ ಸಭೆ ಸೇರಿದ್ದ ಗ್ರಾಮಸ್ಥರು, ಕೆರೆ ತುಂಬಿಸುವಂತೆ ಸಾಕಷ್ಟು ಬಾರಿ ಕೆಬಿಜೆಎನ್‌ಎಲ್ ಅಧಿಕಾರಿಗಳನ್ನು ಕೋರಿದ್ದರೂ ಪ್ರಯೋಜನವಾಗಿಲ್ಲ. ಹೊಕ್ರಾಣಿ ಕೆರೆ ತುಂಬಿದರೆ ಐದು ಗ್ರಾಮಗಳ ಜನ, ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಅಧಿಕಾರಿಗಳು ರೈತರು, ಗ್ರಾಮಸ್ಥರ ಅಳಲು ಕೇಳುತ್ತಿಲ್ಲ. ಹೀಗಾಗಿ ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದು, ಅಂದು ಯಾರೂ ಮತ ಚಲಾಯಿಸುವುದಿಲ್ಲ ಎಂದರು.

ಮುಖಂಡರಾದ ಹಣಮಂತ್ರಾಯ ಕೊಂಗನೂರ, ಬಿ.ಜೆ. ಪಾಟೀಲ, ರಾಚಪ್ಪ ಜಗಲಿ ಮಾತನಾಡಿ, ಚುನಾವಣೆ ಬಂದಾಗ ಜನಪ್ರತಿನಿಧಿಗಳು, ಮಂತ್ರಿಗಳು, ಶಾಸಕರು ಬಂದು ಮತ ಕೇಳಿ ಹೋಗುತ್ತಾರೆ. ಆದರೆ, ನೀಡಿರುವ ಆಶ್ವಾಸನೆಗಳು ಯಾವುದೂ ಈಡೇರಿಲ್ಲ. ಹೊಕ್ರಾಣಿ ಕೆಳಭಾಗದಲ್ಲಿರುವ ಮೂರ‌್ನಾಲ್ಕು ಊರಿನ ಕೆರೆಗಳು ಭರ್ತಿಯಾಗಿದ್ದು, ನಮ್ಮ ಊರಿನ ಕೆರೆ ಮಾತ್ರ ತುಂಬಿಲ್ಲ. ಇದರಿಂದ ಜನ, ಜಾನುವಾರುಗಳು ನೀರಿಗಾಗಿ ತೀವ್ರ ಪರದಾಡುವಂತಾಗಿದೆ ಎಂದರು.

ಮುಖಂಡ ರವಿ ಜಗಲಿ, ಮಡಿವಾಳಪ್ಪ ಪಾಟೀಲ, ಬಿ.ಎಚ್. ಬೇವಿನಮಟ್ಟಿ, ಎಸ್.ಎಂ. ಜಗಲಿ, ಐ.ಎಂ. ಬಿರಾದಾರ, ಎಂ.ಎ. ಕೊಂಗನೂರ, ಯಮನಪ್ಪ ಹಡಪದ, ಬಿ.ಕೆ. ಜಗಲಿ, ಅಮಿನಸಾಬ ಕೂಚಬಾಳ, ಇಬ್ರಾಹಿಂ ಗುರಿಕಾರ, ಲಾಳೇಸಾ ಹಡ್ಲಗೇರಿ, ಎಸ್.ಎಂ.ಪಾಟೀಲ, ಎಸ್.ಬಿ. ವಾಲೀಕಾರ, ಸಿದ್ದನಗೌಡ ಪಾಟೀಲ, ಹುಸೇನಸಾ ಗುರಿಕಾರ, ಶರಣಪ್ಪ ಜಗಲಿ, ಹನುಮಂತ ಇಂಗಳಗೇರಿ, ಎನ್.ಡಿ. ಬಿರಾದಾರ ಇದ್ದರು.