ಬೋಧನೆಗೆ ಪ್ರಶಿಕ್ಷಣಾರ್ಥಿಗಳ ನಿಯೋಜನೆ

ಮುದ್ದೇಬಿಹಾಳ: ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಸಾಕಷ್ಟಿದ್ದು, ಸರ್ಕಾರ ಅತಿಥಿ ಶಿಕ್ಷಕರ ನೇಮಿಸಿಕೊಂಡು ತಾತ್ಕಾಲಿಕವಾಗಿ ಶಿಕ್ಷಕರ ಕೊರತೆ ನೀಗಿಸಲು ಬಿಎಡ್ ಕಾಲೇಜುಗಳ ಪ್ರಶಿಕ್ಷಣಾರ್ಥಿಗಳನ್ನು ನಿಯೋಜಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಕಾಸ ಸುರಳಕರ ಹೇಳಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ ಸಂಜೆ ಉದ್ಯೋಗ ರಥಕ್ಕೆ ಚಾಲನೆ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಅದನ್ನು ನೀಗಿಸಲು ಬಿಎಡ್ ಕಾಲೇಜುಗಳ ಪ್ರಾಚಾರ್ಯರನ್ನು ಸಂರ್ಪಸಿ ಎರಡು, ಮೂರು ತಿಂಗಳ ಅವಧಿವರೆಗೆ ಅವರನ್ನು ಶಾಲೆಗೆ ನೇಮಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಬಾಗಲಕೋಟೆಯಲ್ಲಿ ತಾವು ಸಿಇಒ ಆಗಿದ್ದಾಗ ಈ ಪ್ರಯೋಗ ಮಾಡಿದ್ದು, ಅದು ಯಶಸ್ವಿಯಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು. ತಾಲೂಕಿನ ಹಿರೂರ, ಅ.ಹುಲಗಬಾಳ, ಹಗರಗೊಂಡ, ಹೊಕ್ರಾಣಿ, ಆಲಕೊಪ್ಪರ, ಗೆದ್ದಲಮರಿ ಸೇರಿ ಒಟ್ಟು 7 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಪಾಳುಬಿದ್ದ ಸಾಮರ್ಥ್ಯ ಸೌಧ ಕಟ್ಟಡಕ್ಕೆ ಕಾಯಕಲ್ಪ ನೀಡಲಾಗುವುದು. ಅಕ್ಷರ ದಾಸೋಹ ಯೋಜನೆಯಡಿ ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ರಥಕ್ಕೆ ಚಾಲನೆ ನೀಡಿ ಮಾತನಾಡಿದ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸರ್ಕಾರದ ವಿವಿಧ ಉದ್ಯೋಗ ಮಾಹಿತಿಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವ ಉದ್ದೇಶದಿಂದ ಉದ್ಯೋಗ ರಥಕ್ಕೆ ಚಾಲನೆ ನೀಡಲಾಗಿದೆ ಎಂದರು. ತಾಪಂ ಪ್ರಭಾರಿ ಇಒ ಪಿ.ಕೆ. ದೇಸಾಯಿ,ಪಿಡಿಒ ಖೂಭಾಸಿಂಗ್ ಜಾಧವ ಇದ್ದರು.