ಸಾರಂಗಮಠ ಅವಿರೋಧ ಆಯ್ಕೆ

ಮುದ್ದೇಬಿಹಾಳ: ಭಾಗಶಃ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲದೊಂದಿಗೆ ತಾಲೂಕಿನ ತಂಗಡಗಿ ಗ್ರಾಪಂನ ನೂತನ ಅಧ್ಯಕ್ಷರಾಗಿ ಸಂಗಯ್ಯ ಕೆ. ಸಾರಂಗಮಠ ಅವಿರೋಧವಾಗಿ ಆಯ್ಕೆಯಾದರು.

ಗ್ರಾಪಂ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಸಾಮಾನ್ಯ ವರ್ಗದವರಿಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಈ ವೇಳೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಸಂಗಯ್ಯ ಸಾರಂಗಮಠ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ, ಪ್ರಭಾರಿ ತಾಪಂ ಇಒ ಪಿ.ಕೆ. ದೇಸಾಯಿ ಘೊಷಿಸಿದರು.

ಹಿಂದಿನ ಅಧ್ಯಕ್ಷ ಶಿವಾನಂದ ಮಂಕಣಿ ವಿರುದ್ಧ ಸದಸ್ಯ ಸಂಗಯ್ಯ ಸಾರಂಗಮಠ ಅವರ ನೇತೃತ್ವದಲ್ಲಿ 12 ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿ ಮಂಕಣಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಶಾಂತವ್ವ ಮಾದರ, ಸದಸ್ಯರಾದ ಜಯಶ್ರೀ ಅಳ್ಳಗಿ, ಮಂಜುಳಾ ದೇವರಮನಿ, ರೇಣುಕಾ ಹೊಳಿ, ನೀಲಮ್ಮ ಕದಲ, ಹನುಮಂತ ಅಮರವಾಡಗಿ, ಗುರುಸಂಗಪ್ಪ ಮೋಟಗಿ, ರಾಜೇಶ್ವರಿ ಅಂಬಿಗೇರ, ಮುತ್ತಪ್ಪ ದಾಸರ, ಕವಿತಾ ಜೂಲಗುಡ್ಡ, ಸಂಗಪ್ಪ ಬೇನಾಳ ಹಾಗೂ ತಾಪಂ ಸದಸ್ಯ ಶ್ರೀಶೈಲ ಮರೋಳ, ಬಸವರಾಜ ಇಸ್ಲಾಂಪುರ, ಮುಖಂಡ ರಾಜುಗೌಡ ಕೊಂಗಿ, ರಾಮರಾವ ದೇಶಮುಖ, ಮಲಕಾರಿ ನದಾಫ್, ಡಿ.ಬಿ. ಮುದೂರ ಮತ್ತಿತರರು ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು. ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಚುನಾವಣೆ ಪ್ರತಿಷ್ಠೆ ವಿಷಯ

ಪ್ರತಿಷ್ಠೆ ವಿಷಯವಾಗಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಮಾಜಿ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ, ಗಣ್ಯರಾದ ಎನ್.ಎಸ್. ದೇಶಮುಖ ಅವರ ಮಾರ್ಗದರ್ಶನದಲ್ಲಿ ಸಾರಂಗಮಠ ಅವರ ಅವಿರೋಧ ಆಯ್ಕೆಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸಹಕಾರ ನೀಡಿದರು.