ಮುದ್ದೇಬಿಹಾಳ: ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಅಂಗವಿಕಲರ ಆರೋಗ್ಯ ತಪಾಸಣೆ ಶಿಬಿರದಲ್ಲಿ ಎಲ್ಲ ತಜ್ಞ ವೈದ್ಯರು ಕಡ್ಡಾಯವಾಗಿ ಹಾಜರಿರುವಂತೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಂಗವಿಕಲರ ಒಕ್ಕೂಟದ ಪದಾಧಿಕಾರಿಗಳು ತಾಲೂಕಾಡಳಿತವನ್ನು ಒತ್ತಾಯಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂಗವಿಕಲರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಅಂಗವಿಕಲರ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಕೆ. ಘಾಟಿ, ವಿಆರ್‌ಡಬ್ಲೂೃ ಈರಯ್ಯ ಹಿರೇಮಠ, ಅಲ್ಲಾಭಕ್ಷೃ ಮಕಾಶಿ, ಬಸವರಾಜ ನಾಯ್ಕೋಡಿ, ಪವಾಡೆಪ್ಪ ಚಲವಾದಿ ಮಾತನಾಡಿ, ಎಲುವು ಕೀಲು ತಜ್ಞರು, ಕಿವಿ ಮೂಗು ಗಂಟಲು ತಜ್ಞರು, ಕಣ್ಣು ಹಾಗೂ ಇತರೆ ಅಂಗಾಂಗಳ ವೈದ್ಯರು ಶಿಬಿರದಲ್ಲಿ ಹಾಜರಿರದೇ ನಿರ್ಲಕ್ಷೃ ವಹಿಸುತ್ತಿದ್ದಾರೆ. ಮುಂದಿನ ಶಿಬಿರದ ವೇಳೆ ಎಲ್ಲರನ್ನೂ ಕರೆಯಿಸುವ ವ್ಯವಸ್ಥೆ ಆಗಬೇಕು ಎಂದರು.
ಚವನಬಾವಿ ಗ್ರಾಮದ ಹಣಮಂತಪ್ಪ ಕರಿಗಾರ ಎಂಬುವನ ಸಂಧ್ಯಾಸುರಕ್ಷಾ ಮಾಸಾಶನ 8 ತಿಂಗಳಿನಿಂದಲೂ ಜಮೆ ಆಗಿಲ್ಲ ಎಂದು ಮುಖಂಡ ಬಸವರಾಜ ನಾಯ್ಕೋಡಿ ಆರೋಪಿಸಿದರು.
ಜಕ್ಕೇರಾಳದ ಸಿದ್ದು ಹಂದ್ರಾಳ ಎಂಬುವರಿಗೆ 4 ತಿಂಗಳಿನಿಂದ ಮಾಸಾಶನ ಬಂದಿದ್ದರೂ ಅದನ್ನು ಕೊಡಲು ಪೋಸ್ಟ್‌ಮನ್ ನಿರಾಕರಿಸುತ್ತಿದ್ದಾನೆ. ಕೇಳಿದರೆ ಪಾಸ್‌ಬುಕ್ ಚಾಲ್ತಿಯಲ್ಲಿಲ್ಲ ಎಂದು ಹೇಳುತ್ತಿದ್ದು, ಇದರಿಂದ ತೊಂದರೆಯಾಗಿದೆ ಎಂದು ನಿಂಗಪ್ಪ ಇಂಗಳಗೇರಿ ಅಧಿಕಾರಿಗಳ ಗಮನ ಸೆಳೆದರು.
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಅಂಗವಿಕಲರಿಗೆ ಕಾಯ್ದಿರಿಸಿರುವ ಜಾಗೆಯನ್ನು ಬೇರೊಬ್ಬರು ಅತಿಕ್ರಮಿಸಿದ್ದರೂ ಅದನ್ನು ಬಿಟ್ಟುಕೊಡಿ ಎಂದು ಸಾರಿಗೆ ನೌಕರರು ಹೇಳುವುದಿಲ್ಲ. ಮೇಲಾಗಿ ಅಂಗವಿಕಲರು ಕಂಡು ಬಂದರೆ ಅವರಿಗೆ ಬಸ್ ನಿಲುಗಡೆ ಮಾಡದೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಜಿ.ಎಸ್. ಮಳಗಿ, ಅಂಗವಿಕಲರ ಸಮಸ್ಯೆಯನ್ನು ಆದ್ಯತೆ ಮೇಲೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಬಹುತೇಕರು ಮಾಸಾಶನ ಮಂಜೂರಾತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಧಿಕಾರಿಗಳ ಎದುರಿಗೆ ಪ್ರಸ್ತಾಪಿಸಿದರು. ಇನ್ನುಳಿದಂತೆ ತಹಸೀಲ್ದಾರ್ ಕಚೇರಿಯಲ್ಲಿ ರ‌್ಯಾಂಪ್ ವ್ಯವಸ್ಥೆ, ಮತದಾರರ ಗುರುತಿನ ಚೀಟಿ ವಿತರಿಸುವ ಸಿಬ್ಬಂದಿಯನ್ನು ಕೆಳಗಡೆ ಮಹಡಿಗೆ ಸ್ಥಳಾಂತರಿಸುವುದು, ಶೌಚಗೃಹದ ವ್ಯವಸ್ಥೆ ಕಲ್ಪಿಸುವ ಕಾರ್ಯವನ್ನು ತಾಲೂಕಾಡಳಿತ ತ್ವರಿತವಾಗಿ ಮಾಡಬೇಕು ಎಂದು ಅಂಗವಿಕಲರ ಒಕ್ಕೂಟದ ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದರು.
ತಾಳಿಕೋಟೆ ತಹಸೀಲ್ದಾರ್ ಅನಿಲಕುಮಾರ ಢವಳಗಿ, ತಾಪಂ ಇಒ ಶಶಿಕಾಂತ ಶಿವಪೂರೆ, ಡಾ.ಪ್ರವೀಣ ಸುಣಕಲ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.ಆರ್. ಉಂಡಿಗೇರಿ, ಪುರಸಭೆ ಸಿಬ್ಬಂದಿ ಆರ್.ವೈ. ನಾರಾಯಣಿ ಮತ್ತಿತರರಿದ್ದರು.