ರೈಲ್ವೆ ಯೋಜನೆ ಅನುಷ್ಠಾನಕ್ಕೆ ಪ್ರತಿಭಟನೆ

ಮುದ್ದೇಬಿಹಾಳ: ಆಲಮಟ್ಟಿ-ಯಾದಗಿರಿ ರೈಲು ಮಾರ್ಗದ ಅನುಷ್ಠಾನಕ್ಕಾಗಿ ಆಲಮಟ್ಟಿ-ಯಾದಗಿರಿ ರೈಲ್ವೆ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಪಟ್ಟಣದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ದ್ಯಾಮವ್ವನ ಕಟ್ಟೆಯಿಂದ ಪ್ರಮುಖ ಬೀದಿಗಳಲ್ಲಿ ತಮಟೆ ಮೆರವಣಿಗೆ ಮಾಡಿದ ಹೋರಾಟ ಸಮಿತಿ ಪದಾಧಿಕಾರಿಗಳು ಬಸವೇಶ್ವರ ವೃತ್ತಕ್ಕೆ ಆಗಮಿಸಿ ಬಹಿರಂಗ ಸಭೆ ನಡೆಸಿ ಅಲ್ಲಿಂದ ತಹಸೀಲ್ದಾರ್ ಕಚೇರಿಗೆ ಆಗಮಿಸಿದರು.
ಹೋರಾಟಗಾರ ವೆಂಕನಗೌಡ ಪಾಟೀಲ ಮಾತನಾಡಿ, ಸಂಘಟಿತ ಹೋರಾಟದಿಂದ ಆಲಮಟ್ಟಿ-ಯಾದಗಿರಿ ರೈಲು ಮಾರ್ಗದ ಅನುಷ್ಠಾನ ನಮ್ಮ ಭಾಗದಲ್ಲಿ ಆಗಲು ಸಾಧ್ಯವಿದೆ. ಅದಕ್ಕಾಗಿ ಪ್ರತಿಯೊಬ್ಬರೂ ರೈಲ್ವೆ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು.
ಸಮಿತಿ ಸಂಚಾಲಕ ಬಸವರಾಜ ನಂದಿಕೇಶ್ವರಮಠ, ಬಿಜೆಪಿ ಮುಖಂಡ ಗಿರೀಶಗೌಡ ಪಾಟೀಲ, ಬಿ.ಪಿ. ಕುಲಕರ್ಣಿ ಮತ್ತಿತರರು ಮಾತನಾಡಿ, ಈ ಯೋಜನೆ ಅನುಷ್ಠಾನದಿಂದ ಈ ಭಾಗದಲ್ಲಿ ಸಾಕಷ್ಟು ವಾಣಿಜ್ಯೋದ್ಯಮ ಅಭಿವೃದ್ಧಿಯಾಗಲಿದೆ. 1933 ರಲ್ಲಿಯೇ ಈ ಯೋಜನೆಗಾಗಿ ಸರ್ಕಾರ ಸಮೀಕ್ಷೆ ನಡೆಸಿತ್ತು ಎಂಬುದಕ್ಕೆ ತಾಲೂಕಿನಲ್ಲಿ ಕುರುಹುಗಳಿವೆ. ಆಳುವವರ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಅನುಷ್ಠಾನ ವಿಳಂಬವಾಗಿದೆ. ಈ ಬಾರಿ ಎಲ್ಲರೂ ಸೇರಿ ತೀವ್ರ ಹೋರಾಟ ನಡೆಸಿ ಆಲಮಟ್ಟಿ-ಯಾದಗಿರಿ ಮಾರ್ಗದ ರೈಲ್ವೆ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದರು.
ತಹಸೀಲ್ದಾರ್ ವಿನಯಕುಮಾರ ಪಾಟೀಲ ಮೂಲಕ ಕೇಂದ್ರ, ರಾಜ್ಯ ಸರ್ಕಾರದ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಅರವಿಂದ ಕೊಪ್ಪ, ಪ್ರಭು ಕಡಿ, ಕಾಶೀಬಾಯಿ ರಾಂಪುರ, ಪುರಸಭೆ ಸದಸ್ಯೆ ಎಸ್.ಎಚ್. ದೇವರಳ್ಳಿ, ಮಾಜಿ ಸದಸ್ಯ ರಾಜು ಬಳ್ಳೊಳ್ಳಿ, ವಿಜಯಕುಮಾರ ಬಡಿಗೇರ, ನಿವೃತ್ತ ಮುಖ್ಯಗುರು ಎ.ಸಿ. ಹಿರೇಮಠ, ಶಿವಪುತ್ರ ಅಜಮನಿ, ರಾಜಶೇಖರ ಹೊಳಿ, ಶ್ರೀಶೈಲ ದೊಡಮನಿ, ಮಹಾಂತೇಶ ನಿಡಗುಂದಿ, ರವೀಂದ್ರ ಬಿರಾದಾರ, ಪುನೀತ ಹಿಪ್ಪರಗಿ, ರಾವಸಾಹೇಬ ದೇಸಾಯಿ, ಸುಭಾಷ ಮಾದರ (ಕಾಳಗಿ), ಅರವಿಂದ ಲದ್ದಿಮಠ, ಉದಯ ರಾಯಚೂರ, ಮಲ್ಲಣ್ಣ ಹತ್ತಿ, ಮಹಾಂತೇಶ ಹಡಪದ, ತಾಪಂ ಮಾಜಿ ಸದಸ್ಯ ಖಾಜಾಹುಸೇನ ಎತ್ತಿನಮನಿ, ಚಂದ್ರು ಕಲಾಲ, ಜಗದೀಶ ಪಂಪಣ್ಣವರ ಮತ್ತಿತರರು ಇದ್ದರು.Leave a Reply

Your email address will not be published. Required fields are marked *