ಸಚಿವ ಎಂ.ಬಿ. ಪಾಟೀಲ ‘ಉತ್ತರಕುಮಾರ’

ಮುದ್ದೇಬಿಹಾಳ: ಪ್ರತ್ಯೇಕ ಲಿಂಗಾಯತ ಧರ್ಮದ ಪಿತಾಮಹ ಎಂ.ಬಿ. ಪಾಟೀಲರು ಈ ಹಿಂದೆ ಜಲ ಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಸಾವಿರಾರು ಕೋಟಿ ರೂ. ಕೊಳ್ಳೆ ಹೊಡೆದಿದ್ದು, ನೀರಾವರಿ ಯೋಜನೆಗಳ ಪ್ರಗತಿ ಬಗ್ಗೆ ಪ್ರಶ್ನೆ ಮಾಡಿದರೆ ಅದಕ್ಕೆ ಸಮರ್ಪಕ ಉತ್ತರ ಕೊಡದೆ ಉತ್ತರ ಕುಮಾರನಂತೆ ವರ್ತಿಸುತ್ತಿದ್ದಾರೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ವ್ಯಂಗ್ಯವಾಡಿದ್ದಾರೆ.

ಬುಧವಾರ ಪಟ್ಟಣದಲ್ಲಿ ವಿವಿಧ ನಗರಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಮತಯಾಚಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಆಗದಂತೆ ತಡೆಯಲು ಕಾಂಗ್ರೆಸ್ ಹೈಕಮಾಂಡ್ ಧರ್ಮ ಒಡೆಯುವ ಕುತಂತ್ರ ಮಾಡಿತ್ತು. ಅದರ ನೇತೃತ್ವವನ್ನು ಎಂ.ಬಿ. ಪಾಟೀಲರು ವಹಿಸಿಕೊಂಡಿದ್ದರು. ಹೀಗಾಗಿ ಸಾಮಾನ್ಯ ಜನರು ಪ್ರತ್ಯೇಕ ಧರ್ಮ ಬಗ್ಗೆ ಪ್ರಶ್ನೆ ಕೇಳುವುದನ್ನು ಬಿಡುವುದಿಲ್ಲ ಎಂದರು.

ಧರ್ಮ ವಿಭಜನೆ ಮುನ್ನೆಲೆಯಲ್ಲಿದ್ದವರೆಲ್ಲಾ ಸೋತು ಮನೆಗೆ ಹೋಗಿದ್ದಾರೆ. ಇದರಿಂದ ಕಾಂಗ್ರೆಸ್ ನಾಯಕರಿಗೆ ಪಶ್ಚಾತ್ತಾಪವಾಗಿದೆ. ಹೀಗಾಗಿಯೇ ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕ್ಷಮೆ ಯಾಚಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಪ್ರತ್ಯೇಕ ಧರ್ಮದ ಪಿತಾಮಹ ಎಂ.ಬಿ. ಪಾಟೀಲರು ಹಣ ಮತ್ತು ಅಧಿಕಾರದ ಮದದಿಂದ ದುರಹಂಕಾರದ ಹೇಳಿಕೆ ನೀಡುತ್ತಿದ್ದಾರೆ ಎಂದು ಹರಿಹಾಯ್ದರು.

ಪಟ್ಟಣದ ಹೊರಪೇಟಿ, ವೀರೇಶ್ವರ ನಗರ, ಕಿಲ್ಲಾ, ಕುಂಬಾರ ಓಣಿಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಮುಖಂಡರಾದ ಮಲಕೇಂದ್ರಗೌಡ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಶಿವಶಂಕರಗೌಡ ಹಿರೇಗೌಡರ, ನ್ಯಾಯವಾದಿ ಬಿ.ಜಿ. ಜಗ್ಗಲ, ಪ್ರಭು ಕಡಿ, ಶರಣು ಬೂದಿಹಾಳಮಠ, ರಾಜು ರಾಯಗೊಂಡ, ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಚನ್ನಪ್ಪ ಕಂಠಿ, ಸಹನಾ ಬಡಿಗೇರ ಸೇರಿದಂತೆ ಹಲವರು ಇದ್ದರು.

ಮಾಜಿ ಶಾಸಕ ಸಜ್ಜನರ ಭೇಟಿ
ಶಾಸಕ ಎ.ಎಸ್. ಪಾಟೀಲ ನಡಹಳ್ಳಿಯವರು ಹೊರಪೇಟೆಯಲ್ಲಿರುವ ಮಾಜಿ ಶಾಸಕ ಎಂ.ಎಂ. ಸಜ್ಜನ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದರು.