ಎಇಇ ಹುದ್ದೆಗೆ ಇಬ್ಬರು ಅಧಿಕಾರಿಗಳ ಮುಸುಕಿನ ಗುದ್ದಾಟ

ಮುದ್ದೇಬಿಹಾಳ: ಚಿನ್ನದ ಮೊಟ್ಟೆ ಇಡುವ ಕೋಳಿ ಎಂದೇ ಕರೆಯಲ್ಪಡುವ ತಾಲೂಕು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ ಹುದ್ದೆಗೆ ಇಬ್ಬರು ಅಧಿಕಾರಿಗಳು ಸೋಮವಾರ ಕುರ್ಚಿಗಾಗಿ ಮುಸುಕಿನ ಗುದ್ದಾಟ ನಡೆಸಿದ ಘಟನೆ ಹುಡ್ಕೋದಲ್ಲಿನ ಆರ್‌ಡಬ್ಲೂೃಎಸ್ ಕಚೇರಿಯಲ್ಲಿ ನಡೆಯಿತು.

ಏನಿದು ಹೈಡ್ರಾಮಾ
ಪಟ್ಟಣದ ಆರ್.ಡಬ್ಲೂೃಎಸ್ ಇಲಾಖೆ ಸದ್ಯಕ್ಕೆ ಬಸವನಬಾಗೇವಾಡಿಯ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ ಎಸ್.ಎಸ್. ಕುಮಾರ ಪ್ರಭಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೋಮವಾರ ಮಧ್ಯಾಹ್ನ ಕಚೇರಿಗೆ ಆಗಮಿಸಿದ ಅವರು ಜೆಇಗಳ ಸಭೆ ನಡೆಸುತ್ತಿದ್ದರು. ಆಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್.ವಿ. ನಿಡೋಣಿ ಅವರು ಸರ್ಕಾರದ ಆದೇಶದೊಂದಿಗೆ ಆಗಮಿಸಿದರು.

ಕಚೇರಿ ಸಿಬ್ಬಂದಿಗೆ ಸರ್ಕಾರದಿಂದ ತಮ್ಮನ್ನು ನಿಯುಕ್ತಿಗೊಳಿಸಿದ ಆದೇಶ ಪತ್ರ ನೀಡಿದರು. ಅದನ್ನು ಕರ್ತವ್ಯ ನಿರತ ಪ್ರಭಾರ ಎಇಇ ಎಸ್.ಎಸ್. ಕುಮಾರರಿಗೆ ತೋರಿಸಿದಾಗ, ಅವರು ಸರ್ಕಾರದ ಆದೇಶ ನೇರವಾಗಿ ತಂದು ತೋರಿಸಿದರೆ ಅಧಿಕಾರ ಹಸ್ತಾಂತರಿಸಬೇಕೆ? ಜಿಪಂನಿಂದ ತಮಗೆ ಬಿಡುಗಡೆ ಪತ್ರ ಬಂದಿಲ್ಲ. ಅದು ಬಂದ ಬಳಿಕ ನಾನು ಹುದ್ದೆ ತೊರೆಯುತ್ತೇನೆ ಎಂದು ಸಿಬ್ಬಂದಿಗೆ ತಿಳಿಸಿದರಲ್ಲದೆ, ನಿಯೋಜಿತ ಅಧಿಕಾರಿ ಆರ್.ವಿ. ನಿಡೋಣಿಗೆ ವಿಷಯ ತಿಳಿಸಲು ಸೂಚಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಭಾರ ಎಇಇ ಎಸ್.ಎಸ್. ಕುಮಾರ, ಜಿಪಂ ಸಿಇಒ ಅವರು ನಮಗೆ ಹುದ್ದೆ ಹಸ್ತಾಂತರಿಸುವ ಕುರಿತು ಯಾವುದೇ ಪತ್ರ ನೀಡಿಲ್ಲ. ಆದೇಶಪತ್ರ ಬಂದ ಬಳಿಕ ಹುದ್ದೆ ತೊರೆಯುವುದಾಗಿ ತಿಳಿಸಿದರು.

ಜಿಪಂ ಸಿಇಒ ಅವರು ರುಜು ಮಾಡಿಕೊಟ್ಟಿದ್ದು, ಹುದ್ದೆ ವಹಿಸಿಕೊಂಡು ತಮ್ಮಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಿದ್ದರು. ಅದರಂತೆ ಇಂದು ಕಚೇರಿಗೆ ಆಗಮಿಸಿದ್ದೆ. ಆದರೆ, ಇಲ್ಲಿ ಅಧಿಕಾರದಲ್ಲಿರುವ ಅಧಿಕಾರಿಗಳು ಆದೇಶ ಪತ್ರ ಕೇಳುತ್ತಿದ್ದು ಅದನ್ನು ತಂದೇ ಹುದ್ದೆಯಲ್ಲಿ ಹಾಜರಾಗುವುದಾಗಿ ನಿಯೋಜಿತ ಆರ್‌ಡಬ್ಲೂೃಎಸ್ ಅಧಿಕಾರಿ ಆರ್.ವಿ. ನಿಡೋಣಿ ತಿಳಿಸಿದರು. ಇದರಿಂದಾಗಿ ಕೆಲ ಕಾಲ ಇಲಾಖೆ ಸಿಬ್ಬಂದಿ ಅವಕ್ಕಾದರು.

ಇಬ್ಬರು ಅಧಿಕಾರಿಗಳಲ್ಲಿ ಉಂಟಾಗಿರುವ ಗೊಂದಲವನ್ನು ಇಲಾಖೆ ಮೂಲಕ ಸಂಪರ್ಕ ಸಾಧಿಸಿ ಪರಿಹರಿಸಲಾಗುತ್ತದೆ. ಆರ್.ವಿ.ನಿಡೋಣಿ ಎಂಬುವರಿಗೆ ಸರ್ಕಾರದ ಆದೇಶ ಪತ್ರದ ಮೇಲೆ ರುಜು ಮಾಡಿ ಕಳಿಸಿದ್ದು, ಈ ಬಗ್ಗೆ ಉಂಟಾದ ಸಮಸ್ಯೆ ಸರಿಪಡಿಸಲಾಗುವುದು.
ವಿಕಾಸ ಸುರಳಕರ್, ಸಿಇಒ, ವಿಜಯಪುರ