ಸಚಿವ ಎಂ.ಬಿ. ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಬೇಡಿ

ಮುದ್ದೇಬಿಹಾಳ: ಧರ್ಮ ಹಾಗೂ ನೀರಿನ ವಿಷಯದಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ ಅವರ ವೈಫಲ್ಯಗಳನ್ನು ತೆರೆದಿಡುವ ವೇಳೆ ಉದ್ಭವಿಸಿದ್ದ ವೈಯಕ್ತಿಕ ಟೀಕೆ, ಪ್ರತಿಟೀಕೆಗೆ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಂಗಳವಾರ ತಾತ್ಕಾಲಿಕ ಬ್ರೆಕ್ ಹಾಕಿದ್ದಾರೆ.

ತಾಲೂಕಿನ ಇಂಗಳಗೇರಿಯಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಮತಯಾಚಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನನ್ನ ಬಗ್ಗೆ ಗೌರವ ಹೊಂದಿರುವ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮುಖಂಡರು ಸಚಿವ ಎಂ.ಬಿ. ಪಾಟೀಲ ಹಾಗೂ ಅವರ ಬೆಂಬಲಿಗರು ತಮ್ಮ ವಿರುದ್ಧ ನೀಡುವ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಸಂಯಮ ತೋರಬೇಕೆಂದು ಮನವಿ ಮಾಡಿದರು.

ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವುದು ನಮಗೆ ಮುಖ್ಯವಾಗಿದೆ. ಜಿಲ್ಲೆಯ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ತಾಲೂಕಿನಿಂದಲೇ ಅತೀ ಹೆಚ್ಚು ಮತಗಳನ್ನು ಬಿಜೆಪಿಗೆ ಹಾಕಿಸುವ ಮೂಲಕ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದಕ್ಕೆ ಶ್ರಮಿಸುತ್ತೇನೆ. ಆ ಮೂಲಕ ನನ್ನ ವಿರೋಧಿಗಳಿಗೆ ಉತ್ತರ ನೀಡುತ್ತೇನೆ ಎಂದರು.

ಸಚಿವ ಎಂ.ಬಿ. ಪಾಟೀಲ ಹಾಗೂ ಅವರ ಬೆಂಬಲಿಗರು ಯಾರು ಏನು ಹೇಳಿದರೂ ಚುನಾವಣೆ ಮುಗಿಯುವರೆಗೂ ಮೌನವಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ. ನಂತರ ಪಕ್ಷದ ವರಿಷ್ಠರ ಗಮನಕ್ಕೆ ತಂದು ಹೋರಾಟ ಹೇಗೆ ಮುಂದುವರಿಸಬೇಕೆಂದು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.

ರೈತರು ಬೆಳೆದ ಬೆಂಬಲ ಬೆಲೆಗೆ ದ್ವಿಗುಣಗೊಳಿಸುವುದು, ಬಡವರಿಗೆ ಉಚಿತ ಮನೆ ನಿರ್ಮಿಸಿಕೊಡುವುದು, ಉಚಿತ ವಿದ್ಯುತ್ ಹಾಗೂ ಆಯುಷ್ಮಾನ್ ಭಾರತ ಯೋಜನೆಯಡಿ ಆರೋಗ್ಯ ಸೇವೆ ಒದಗಿಸುವುದು ಮೋದಿ ಸರ್ಕಾರದ ಯೋಜನೆಗಳಾಗಿವೆ ಎಂದರು.

ಬಿಜೆಪಿ ಮುಖಂಡ ಮಲಕೇಂದ್ರಗೌಡ ಪಾಟೀಲ, ಸಿದ್ದನಗೌಡ ತಿಳಗೂಳ, ರಮೇಶ ಸಾಸನೂರ, ತಾಪಂ ಮಾಜಿ ಉಪಾಧ್ಯಕ್ಷ ಕಾಶಪ್ಪ ತೊಗರಿ, ಚೆನ್ನು ಸಜ್ಜನ, ಬಸವರಾಜ ಕುಂಟೋಜಿ, ಪ್ರಭು ಪೊಲೇಶಿ ಮತ್ತಿತರರಿದ್ದರು.
ತಾಲೂಕಿನ ಹಗರಗುಂಡ, ಇಂಗಳಗೇರಿ, ಜಮ್ಮಲದಿನ್ನಿ, ಗುಡ್ನಾಳ ಮತ್ತಿತರರ ಗ್ರಾಮಗಳಲ್ಲಿ ಪ್ರಚಾರ ನಡೆಸಲಾಯಿತು.

ದೇಶದ ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿರುವ ಜನಹಿತ ಯೋಜನೆಗಳ ಕುರಿತು ಜನಸಾಮಾನ್ಯರಿಗೆ, ಗ್ರಾಮೀಣರಿಗೆ ತಿಳಿಸುವ ಕೆಲಸ ಮಾಡುತ್ತೇನೆ. ರಾಷ್ಟ್ರದ ಭದ್ರತೆ ಹಾಗೂ ಆಡಳಿತ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಕೈಗೊಳ್ಳುವ ನಿಲುವುಗಳಿಂದ ಜಗತ್ತೇ ನಮ್ಮತ್ತ ತಿರುಗಿ ನೋಡುವಂತಾಗಿದೆ. ಮತ್ತೊಮ್ಮೆ ಮೋದಿ ಆಯ್ಕೆಗೆ ಮತದಾರರ ಚಿತ್ತ ಸೆಳೆಯುವುದು ನಮ್ಮ ಗುರಿ.
ಎ.ಎಸ್. ಪಾಟೀಲ ನಡಹಳ್ಳಿ, ಶಾಸಕರು