ಮಣ್ಣಿಗೆ ಬಂದವರು ಮಣ್ಣಾದರು..!

ಮುದ್ದೇಬಿಹಾಳ: ಸಂಬಂಧಿಕರೊಬ್ಬರ ಅಂತ್ಯಕ್ರಿಯೆ ಮುಗಿಸಿ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ತಾಲೂಕಿನ ಕಂದಗನೂರ ಬಳಿ ಚಾಲಕನ ನಿಯಂತ್ರಣ ತಪ್ಪಿ ವಾಹನ ತಗ್ಗಿಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಐವರು ಸಾವನ್ನಪ್ಪಿದ್ದು, 15ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಹುನಗುಂದ ತಾಲೂಕಿನ ಬೊಮ್ಮಣಗಿಯ ಬಂದಗಿಸಾಬ ಲಾಲಸಾಬ ಮೊಕಾಶಿ (65), ಹುಸೇನಬಿ ರಜಾಕಸಾಬ ಮೊಕಾಶಿ (45), ಗುಳೇದಗುಡ್ಡ ತಾಲೂಕಿನ ಹಳದೂರಿನ ಖಾಜಾಬಿ ಹುಸೇನಸಾಬ ಸಾದನಿ (48) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗುಳೇದಗುಡ್ಡ ತಾಲೂಕಿನ ಹಳದೂರಿನ ಅಮೀನಸಾಬ ಹುಸೇನಸಾಬ ಸಾದನಿ (55), ಭಾರತವ್ವ ಅಲಿಯಾಸ ಪಾರ್ವತೆವ್ವ ನೂರೆಂದಪ್ಪ ರಕ್ಕಸಗಿ (50) ಚಿಕಿತ್ಸೆ ಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಘಟನೆಯ ವಿವರ
ಮುದ್ದೇಬಿಹಾಳ ತಾಲೂಕಿನ ಕಂದಗನೂರ ಗ್ರಾಮದಲ್ಲಿ ಶನಿವಾರ ಖೈರುಮಾ ಇಮಾಮಸಾಬ ನಾಯ್ಕೋಡಿ ಎಂಬುವವರು ನಿಧನ ರಾಗಿದ್ದರು. ಅವರ ಅಂತ್ಯಕ್ರಿಯೆಗಾಗಿ ಬಾದಾಮಿ ತಾಲೂಕಿನ ಹಳದೂರು, ಹುನಗುಂದ ತಾಲೂಕಿನ ಬೊಮ್ಮಣಗಿ, ಮರಡಿ ಬೂದಿಹಾಳ ಗ್ರಾಮದವರು ಆಗಮಿಸಿದ್ದರು. ಮಧ್ಯಾಹ್ನ 2.30ಕ್ಕೆ ಅಂತ್ಯಕ್ರಿಯೆ ಮುಗಿಸಿ ವಾಪಸ್ ಊರಿಗೆ ತೆರಳುವಾಗ ಕಂದಗನೂರ ಬಳಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ತಗ್ಗಿಗೆ ಉರುಳಿ ಬಿದ್ದಿದೆ. ವಾಹನ ಬಿದ್ದ ಸ್ಥಳದಲ್ಲಿ ದೊಡ್ಡ ದೊಡ್ಡ ಕಲ್ಲುಬಂಡೆಗಳು, ಮುಳ್ಳುಗಳಿದ್ದರಿಂದ ಹೆಚ್ಚಿನ ಜನರು ಸಾವನ್ನಪ್ಪಲು ಹಾಗೂ ಗಾಯಗೊಳ್ಳಲು ಕಾರಣವಾಗಿದೆ. ವಾಹನ ಚಲಾಯಿಸುವಾಗ ಚಾಲಕ ಮದ್ಯಪಾನ ಮಾಡಿದ್ದ ಎಂದು ಗಾಯಾಳುಗಳು ಹೇಳಿದ್ದಾರೆ.

ಗಾಯಾಳುಗಳ ವಿವರ
ಮರಡಿ ಬೂದಿಹಾಳದ ಮಮ್ತಾಜ ರಾಜೇಸಾಬ ಮನ್ಯಾಳ (28), ಹಳದೂರಿನ ಲಾಲಬಿ ಅಮೀನಸಾಬ ಸಾದನಿ (38), ಮಮ್ತಾಜ ರಾಜೇಸಾಬ ಸಾಧನಿ (38), ರತ್ನವ್ವ ಶೇಖರಪ್ಪ ಮೇಟಿ (40), ಖಾಜೇಸಾಬ ಹುಸೇನಸಾಬ ಸಾಧನಿ(33), ಅಮೀನಸಾಬ ಅಲ್ಲಾಸಬಾ ಸಾಧನಿ (25), ರೇಷ್ಮಾ ಮಹ್ಮದರಫೀಕ ಶಿರೋಳ (26), ಹುಸೇನಸಾಬ ದಾವಲಸಾಬ ಓಲೇಕಾರ(65), ರಜಾಕಸಾಬ ಹುಸೇನಸಾಬ ಸಾಧನಿ (30), ಹುಸೇನಬಿ ದಾವಲಸಾಬ ಬಾಳಿಕಾಯಿ (45), ರಮಜಾನಸಾಬ ಹುಸೇನಸಾಬ ಸಾಧನಿ(45), ಹುಸೇನಮಾ ಹಸನಸಾಬ ಡಾಲಾಯತ (68), ಉತಾಲಸಾಬ ಅಮಿನಸಾಬ ಸಾಧನಿ (55), ಬಿಬಿಜಾನ ಅಮಿನಸಾಬ ಸಾಧನಿ(38), ಇಮಾಬಿ ಅಲ್ಲಾಸಾಬ ಡಾಲಾಯತ (60) ಗಾಯಗೊಂಡಿದ್ದಾರೆ.

ಹಾಲಿ, ಮಾಜಿ ಶಾಸಕರ ಭೇಟಿ
ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಮಾಜಿ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಸುದ್ದಿಗಾರರ ಜತೆ ಮಾತನಾಡಿ, ಅಪಘಾತದಲ್ಲಿ ಮೃತಪಟ್ಟವರು ಹಾಗೂ ಗಾಯಾಳುಗಳು ಮಾಜಿ ಸಿಎಂ ಸಿದ್ದರಾಮಯ್ಯನವರು ಪ್ರತಿನಿಧಿಸುವ ಬಾದಾಮಿ ತಾಲೂಕಿನವರು ಎಂದು ತಿಳಿದು ಬಂದಿದೆ. ಅವರ ಆಪ್ತ ಸಹಾಯಕ ವೆಂಕಟೇಶ್ ಅವರೊಂದಿಗೆ ಮಾತನಾಡಿದ್ದೇನೆ. ಅಲ್ಲದೆ ಜಿಲ್ಲಾಧಿಕಾರಿಗಳಿಗೂ ಈ ಕುರಿತು ಮಾಹಿತಿ ಕೊಟ್ಟಿದ್ದು ರಾಜ್ಯ ಸರ್ಕಾರದಿಂದ ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಧನ ಘೋಷಿಸಬೇಕು ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.
ಮಾಜಿ ಶಾಸಕ ಸಿ.ಎಸ್. ನಾಡಗೌಡ ಮಾತನಾಡಿ, ಆರೋಗ್ಯ ಸಚಿವ ಶಿವಾನಂದ ಪಾಟೀಲ ಹಾಗೂ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದೇನೆ. ಪರಿಹಾರ ದೊರಕಿಸಿಕೊಡಲು ಪ್ರಯತ್ನ ಮಾಡುತ್ತೇನೆ ಎಂದರು.

ಅಧಿಕಾರಿಗಳ ಭೇಟಿ
ಅಪರ ಎಸ್‌ಪಿ ಬಿ.ಎಸ್. ನೇಮಗೌಡ, ಸಿಪಿಐ ಮಹೇಶ್ವರಗೌಡ, ಪಿಎಸ್‌ಐಗಳಾದ ಸಂಜಯ ತಿಪ್ಪರೆಡ್ಡಿ, ಗೋವಿಂದಗೌಡ ಪಾಟೀಲ, ತಹಸೀಲ್ದಾರ್ ವಿನಯಕುಮಾರ ಪಾಟೀಲ, ಮುದ್ದೇಬಿಹಾಳ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆರ್.ಜಿ. ಹಿರೂರ, ಸೂಪರವೈಸರ್ ಬಸವರಾಜ ಕರಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಚಿಕಿತ್ಸೆ ನೀಡಿದ ವೈದ್ಯರು, ಸಿಬ್ಬಂದಿ
ತಾಲೂಕು ವೈದ್ಯಾಧಿಕಾರಿ ಡಾ. ಸತೀಶ ತಿವಾರಿ, ಆಡಳಿತ ವೈದ್ಯಾಧಿಕಾರಿ ಡಾ. ಅನಿಲಕುಮಾರ ಶೇಗುಣಸಿ, ಡಾ. ಮಾನಸಾ, ಡಾ. ಸಂಗಮೇಶ ದಶವಂತ, ಡಾ. ನಿಂಗರಾಜ ಪತ್ತಾರ, ಡಾ. ಪ್ರವೀಣ ಸುಣಕಲ್ ಹಾಗೂ ಸಿಬ್ಬಂದಿ ಚಿಕಿತ್ಸೆ ಗಾಯಾಳುಗಳಿಗೆ ನೀಡಿದರು. ಅಲ್ಲದೇ ಗಂಭೀರ ಗಾಯಗಳಾದವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗಳಿಗೆ ಕಳಿಸಿಕೊಟ್ಟರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು 108 ಸಿಬ್ಬಂದಿ ಕ್ಷಿಪ್ರ ಗತಿಯಲ್ಲಿ ಕಾರ್ಯ ನಿರ್ವಹಿಸಿದರು.

ರೋಜಾ ಇದ್ದವರು ಜೀವ ಬಿಟ್ಟರು
ಕಂದಗನೂರ ಬಳಿ ಸಂಭವಿಸಿದ ಅಪಘಾತದಲ್ಲಿ ರೋಜಾದಲ್ಲಿದ್ದವರು ಜೀವ ಬಿಟ್ಟಿದ್ದಾರೆ. ಬೊಮ್ಮಣಗಿಯ ಬಂದಗಿಸಾಬ ಲಾಲಸಾಬ ಮೊಕಾಶಿ (65), ಹುಸೇನಬಿ ರಜಾಕಸಾಬ ಮೊಕಾಶಿ (45) ಅವರು ರೋಜಾ ಇದ್ದರು. ಊರಿಗೆ ಬಂದಾಗಲೂ ಹನಿ ನೀರನ್ನೂ ಬಾಯಿಯಲ್ಲಿ ಹಾಕಿಕೊಂಡಿರಲಿಲ್ಲ.ಅಪಘಾತದಲ್ಲಿ ಸ್ಥಳದಲ್ಲಿಯೇ ಜೀವ ಬಿಟ್ಟಿದ್ದು ಕಣ್ಣಾರೆ ಕಂಡು ಎದೆಯೊಡೆಯುವಂತಾಗಿತ್ತು ಎಂದು ಕಣ್ಣೀರು ಸುರಿಸಿದರು.

ಗ್ರಾಮಸ್ಥರ ಮಾನವೀಯತೆ
ಕಂದಗನೂರಿನ ಬಳಿ ಅಪಘಾತ ಸಂಭವಿಸಿದ ಕೂಡಲೇ ಗ್ರಾಮಸ್ಥರು ಗಾಯಾಳುಗಳನ್ನು ತಮ್ಮ ಖಾಸಗಿ ವಾಹನಗಳಲ್ಲಿ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ಒಯ್ದು ದಾಖಲಿಸಿ ಮಾನವೀಯತೆ ಮೆರೆದರು.

ಚಾಲಕನ ಬಂಧನ
ಕುಡಿದ ಮತ್ತಿನಲ್ಲಿ ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಆರೋಪದ ಮೇಲೆ ಟಾಟಾ ಏಸ್ ಚಾಲಕ, ಬಾದಾಮಿ ತಾಲೂಕಿನ ಹಳದೂರಿನ ಮಹಾಂತೇಶ ನಾರಾಯಣಪ್ಪ ಮಕಮಣಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗೂಡ್ಸ್ ವಾಹನದಲ್ಲಿ 30ಕ್ಕೂ ಹೆಚ್ಚಿನ ಜನರನ್ನು ಹತ್ತಿಸಿಕೊಂಡಿದ್ದು ಅಧಿಕ ಜನರು ಸಾವಿಗೀಡಾಗಲು ಕಾರಣವಾಗಿದೆ.