ಮನುಷ್ಯನಷ್ಟೇ ಬದುಕುವ ಸ್ವಾತಂತ್ರ್ಯ ಪಕ್ಷಿಗಳಿಗಿದೆ

ಮುದ್ದೇಬಿಹಾಳ: ಪರಿಸರದಲ್ಲಿರುವ ಪಕ್ಷಿಗಳು ಹಾಗೂ ಪ್ರಾಣಿಗಳು, ಮನುಷ್ಯರಷ್ಟೇ ಬದುಕುವ ಸ್ವಾತಂತ್ರ್ಯ ಹೊಂದಿವೆ. ಈ ಬದುಕು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ಎಂಜಿವಿಸಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್.ವಿ. ಗುರುಮಠ ಹೇಳಿದರು.

ಪಟ್ಟಣದ ಹುಡ್ಕೋ ಉದ್ಯಾನದಲ್ಲಿ ಗುರುವಾರ ವಿಶ್ವ ಗುಬ್ಬಚ್ಚಿ ಹಾಗೂ ವಿಶ್ವ ಅರಣ್ಯ ದಿನಾಚರಣೆ ನಿಮಿತ್ತ ಪ್ರಾದೇಶಿಕ ಅರಣ ಇಲಾಖೆ ಹಾಗೂ ಹಸಿರು ತೋರಣ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಪಕ್ಷಿಗಳಿಗೆ ಅನುಕೂಲಕರವಾದ ಪರಿಸರ ಸ್ನೇಹಿ ಮಣ್ಣಿನ ಬುಟ್ಟಿಗಳ ಸಾಮೂಹಿಕ ವಿತರಣೆ ಹಾಗೂ ಗಿಡಕ್ಕೆ ಕಟ್ಟುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಲ್ಕೈದರಿಂದ ಏಳು ವರ್ಷ ಜೀವಿತಾವಧಿಯಲ್ಲಿರುವ ಗುಬ್ಬಚ್ಚಿಗಳು ಇರುವುದು ಸಂಘಜೀವನ ಮಾಡುತ್ತವೆ. ಸಜ್ಜೆ ಹಾಗೂ ಅಕ್ಕಿ ಹೆಚ್ಚು ಗುಬ್ಬಿಗಳು ಹೆಚ್ಚು ಇಷ್ಟಪಡುತ್ತವೆ. ಗುಬ್ಬಚ್ಚಿ ಸಂತತಿ ಉಳಿವಿಗೆ ಒಬ್ಬರ ಕಾರ್ಯ ಅಲ್ಲ. ಎಲ್ಲರೂ ಕೈ ಜೋಡಿಸಿದರೆ ಗುಬ್ಬಚ್ಚಿಗಳ ಸಂತತಿ ಉಳಿಸಲು ಸಾಧ್ಯ ಎಂದರು.

ಉಪ ವಲಯ ಅರಣ್ಯಾಧಿಕಾರಿಗಳಾದ ಸುಭಾಸಚಂದ್ರ ಬಿ.ಕೆ, ಹಸಿರು ತೋರಣ ಬಳಗದ ಅಧ್ಯಕ್ಷ ನಾಗಭೂಷಣ ನಾವದಗಿ, ಡಾ. ವೀರೇಶ ಪಾಟೀಲ, ಪ್ರಾದೇಶಿಕ ಅರಣ್ಯಾಧಿಕಾರಿಗಳಾದ ಮಲ್ಲಪ್ಪ ತೇಲಿ, ಮಹೇಶ ಕೊಟ್ಟಲಗಿ ಮಾತನಾಡಿದರು.

ಬಳಗದ ಸದಸ್ಯರಾದ ಸುರೇಶ ಕಲಾಲ, ಬಿ.ಪಿ. ಚಾಣ, ಎಸ್.ಬಿ. ಪೋಳ, ಬಿ.ಐ. ಪಾಟೀಲ, ಡಾ.ವೀರೇಶ ಇಟಗಿ, ಅರಣ್ಯ ರಕ್ಷಕ ರಮೇಶ ಮೆಟಗುಡ್ಡ, ಸಂತೋಷ ಕಮಲಾಕರ ಭಾಗವಹಿಸಿದ್ದರು. ಐವತ್ತಕ್ಕೂ ಹೆಚ್ಚು ಪರಿಸರ ಸ್ನೇಹಿ ಮಣ್ಣಿನ ತೊಟ್ಟಿ ಹಾಗೂ ಪಕ್ಷಿಗಳಿಗೆ ಧಾನ್ಯಗಳ ಬುಟ್ಟಿಯನ್ನು ಗಿಡಗಳಿಗೆ ತೂಗು ಹಾಕಲಾಯಿತು. ಶ್ರೀನಿವಾಸರಾವ ಕುಲಕರ್ಣಿ ಪ್ರಾರ್ಥಿಸಿದರು. ಎಚ್.ವೈ. ಪಾಟೀಲ ಸ್ವಾಗತಿಸಿದರು. ಮಹಾಬಳೇಶ ಗಡೇದ ನಿರೂಪಿಸಿದರು.