ದಾಖಲೆ ಬಹಿರಂಗಪಡಿಸಲು ಒತ್ತಾಯ

ಮುದ್ದೇಬಿಹಾಳ: ಜಿಲ್ಲೆಯ ನೀರಾವರಿ ಯೋಜನೆಗಳಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರವಾಗಿದೆ ಎಂದು ಮತಕ್ಷೇತ್ರದ ಶಾಸಕರು ಆರೋಪಿಸುತ್ತಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆಗೊಳಿಸಿ ಸಾರ್ವಜನಿಕರಿಗೆ ಸತ್ಯಾಂಶ ತಿಳಿಸಬೇಕು ಎಂದು ಯುವಜನ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಒತ್ತಾಯಿಸಿದರು.

ತಾಲೂಕಿನ ನಾಲತವಾಡ ಬಸ್ ನಿಲ್ದಾಣದ ಕಾಮಗಾರಿ ಐದು ತಿಂಗಳಲ್ಲಿ ಪೂಣಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದ್ದರಾದರೂ ಎಂಟು ತಿಂಗಳಾದರೂ ಪ್ರಗತಿ ಕಂಡಿಲ್ಲ. ತಾಲೂಕಿನ ಯಾವುದೇ ಇಲಾಖೆಯಲ್ಲಿ ಹೋದರೂ ಲಂಚವಿಲ್ಲದೆ ಕೆಲಸ ಆಗುವುದಿಲ್ಲ. ಅಧಿಕಾರಿಗಳು ಲಂಚ ಬೇಡಿದರೆ ನಮಗೆ ತಿಳಿಸುವಂತೆ ಶಾಸಕರು ಹೇಳುತ್ತಾರೆ. ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ಭ್ರಷ್ಟಾಚಾರಕ್ಕೆ ಆಸ್ಪದ ಕೊಟ್ಟಿದ್ದು ಏತಕ್ಕೆ? ತಾಲೂಕಿನ ಗ್ರಾಮೀಣ ಭಾಗದಲ್ಲಿ ಇನ್ನೂವರೆಗೂ ಅಕ್ರಮ ಮದ್ಯ ಮಾರಾಟ ನಡೆದಿದೆ. ಇದರ ನಿಯಂತ್ರಣಕ್ಕೆ ಯಾವ ಸೂಚನೆ ಅಧಿಕಾರಿಗಳಿಗೆ ನೀಡಿದ್ದೀರಿ? ಎಂದು ಪಟ್ಟಣದ ಜೆಡಿಎಸ್-ಕಾಂಗ್ರೆಸ್ ಪ್ರಚಾರ ಕಾರ್ಯಾಲಯದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ತಾಳಿಕೋಟೆ ಹಾಗೂ ಮುದ್ದೇಬಿಹಾಳ ಮತಕ್ಷೇತ್ರದ ಪದವಿ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುವುದಾಗಿ ವಿಧಾನಸಭಾ ಚುನಾವಣೆ ಆರಂಭದಲ್ಲಿ ತಿಳಿಸಿದ್ದೀರಿ. ಆ ಯೋಜನೆ ಏನಾಯಿತು? ಚುನಾವಣೆ ಬಂದಾಗಲಷ್ಟೇ ಜನರನ್ನು ಓಲೈಸದೆ ಜನಪ್ರತಿನಿಧಿಯಾದವರು ಜನರ ಹಿತಕ್ಕಾಗಿ ಕೆಲಸ ಮಾಡಬೇಕು. ಮತಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಏನೇನಾಗಿವೆ? ಎಂಬುದನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು.

ಸೇನೆ ಜಿಲ್ಲಾಧ್ಯಕ್ಷ ಮಲ್ಲು ಕಾರಜೋಳ, ಸಂದೀಪ ಬೂನಕೊಪ್ಪ, ಜಮಾಲ ತಂಗಡಗಿ, ಅರುಣ ಪಾಟೀಲ, ಮಂಜುನಾಥ ಹಡಲಗೇರಿ, ಕುಮಾರಗೌಡ ಪಾಟೀಲ, ಗಂಗು ಜೋಗಿ, ಕಾಶೀಂ ಚಪ್ಪರಬಂದ, ಮೌಸಿಂ ಚಪ್ಪರಬಂದ, ಶಂಕರ ಭಜಂತ್ರಿ ಮತ್ತಿತರರಿದ್ದರು.