ಬಾಲ್ಯವಿವಾಹ ಮಾಡಿದರೆ 2 ವರ್ಷ ಜೈಲು, ಲಕ್ಷ ರೂ. ದಂಡ

ಮುದ್ದೇಬಿಹಾಳ: ಬಾಲ್ಯವಿವಾಹ ನಿಷೇಧ(ತಿದ್ದುಪಡಿ) ಅಧಿನಿಯಮ-2016ರ ಕಲಂ 15(ಚಿ) ಪ್ರಕಾರ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ನಡೆದ ಬಾಲ್ಯವಿವಾಹದ ಅಪರಾಧದ ಸಂಜ್ಞೆ ಗಮನಿಸಿ ತಾವಾಗಿಯೇ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಅಧಿಕಾರಿ ನಿರ್ಮಲಾ ಸುರಪುರ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಹಾಗೂ ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಅಧಿನಿಯಮ -2016, ಬಾಲ್ಯವಿವಾಹ ನಿಷೇಧ(ಕರ್ನಾಟಕ) ನಿಯಮಗಳು- 2014ರ ಕುರಿತು ತಾಲೂಕು ಮಟ್ಟದ ಬಾಲ್ಯವಿವಾಹ ನಿಷೇಧಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಬಾಲ್ಯವಿವಾಹ ನಿಷೇಧ(ಕರ್ನಾಟಕ ತಿದ್ದುಪಡಿ) ಅಧಿನಿಯ-2016ರ ಪ್ರಕಾರ ಒಂದು ವರ್ಷಕ್ಕೆ ಕಡಿಮೆಯಿಲ್ಲದ, ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಸದರಿ ಕಲಂದನ್ವಯ ಮಹಿಳೆಯೂ ಕಾರಾವಾಸ ಶಿಕ್ಷೆಗೆ ಅರ್ಹಳಾಗಿರುತ್ತಾಳೆ ಎಂದರು.

ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ನಿಯಮಗಳು, ಸಾಮೂಹಿಕ ವಿವಾಹಗಳಲ್ಲಿ ಬಾಲ್ಯವಿವಾಹ ನಿಷೇಧಾಧಿಕಾರಿಗಳ ಪಾತ್ರ ಕುರಿತು ಚರ್ಚಿಸಲಾಯಿತು. ತಹಸೀಲ್ದಾರ್ ವಿನುಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಾಪಂ ಪ್ರಭಾರ ಇಒ ಪಿ.ಕೆ. ದೇಸಾಯಿ, ಸಿಡಿಪಿಒ ಗೀತಾ ಗುತ್ತರಗಿಮಠ, ಡಾ. ಸತೀಶ ತಿವಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.ಆರ್. ಉಂಡಿಗೇರಿ, ಬಿಇಒಗಳಾದ ಅನಸೂಯಾ ತೇರದಾಳ, ಎಸ್.ಡಿ. ಗಾಂಜಿ ಮತ್ತಿತರ ಅಧಿಕಾರಿಗಳಿದ್ದರು.

ಬಾಲ್ಯವಿವಾಹ ನೆರೆವೇರಿಸುವ, ನಡೆಸುವ, ನಿರ್ದೇಶಿಸುವ ಅಥವಾ ಪ್ರೇರೇಪಿಸುವ ಯಾವುದೇ ವ್ಯಕ್ತಿ ಹಾಗೂ ಮಗು ಬಾಲ್ಯವಿವಾಹಕ್ಕೆ ಒಳಪಟ್ಟರೆ ಮಗುವಿನ ಹೊಣೆ ಹೊತ್ತಿರುವ ಯಾವುದೇ ವ್ಯಕ್ತಿ, ಆ ವ್ಯಕ್ತಿ ತಂದೆ-ತಾಯಿಯಾಗಲಿ, ಪೋಷಕರಾಗಲಿ ಅಥವಾ ಯಾವುದೇ ವ್ಯಕ್ತಿಯಾಗಲಿ ಅಪರಾಧಿಗಳಾಗುತ್ತಾರೆ.
ನಿರ್ಮಲಾ ಸುರಪುರ, ಜಿಲ್ಲಾ ಮಕ್ಕಳ ಘಟಕದ ರಕ್ಷಣಾಧಿಕಾರಿ