ನೀರಾವರಿಗೆ ಬಿಡಿಗಾಸು ಕೊಡದ ಮೋದಿ

ಮುದ್ದೇಬಿಹಾಳ: ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರೂ ಒಂದು ನಯಾ ಪೈಸಾ ಹಣವನ್ನು ಮೋದಿ ಸರ್ಕಾರ ಕೊಡುತ್ತಿಲ್ಲ. ರಾಜ್ಯಕ್ಕೆ ಅನ್ಯಾಯ ಮಾಡಿರುವ ನರೇಂದ್ರ ಮೋದಿ ಅವರ ಬಿಜೆಪಿ ನೇತೃತ್ವದ ಸರ್ಕಾರವನ್ನು ಬೆಂಬಲಿಸಬೇಡಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಡಾ. ಸುನೀತಾ ಚವಾಣ್ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡಿ, ಬಾಗಲಕೋಟೆಯಲ್ಲಿ ಮಾತನಾಡುವ ಮೋದಿ ಅವರು ಐದು ವರ್ಷ ಯಾಕೆ ಗೆಜೆಟ್ ನೋಟಿಫಿಕೇಷನ್ ಬಗ್ಗೆ ಬೇಗ ತೀರ್ಮಾನ ಕೊಡಲಿಲ್ಲ. 1500 ಕೋಟಿ ರೂ. ನರೇಗಾ ಯೋಜನೆಯ ಹಣ ಬಿಡುಗಡೆ ಮಾಡಿಲ್ಲ. ಅದನ್ನು ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿ ಕೂಲಿಕಾರರಿಗೆ ಪಾವತಿಸಿದೆ. ಸಮ್ಮಿಶ್ರ ಸರ್ಕಾರ ಅಸಮರ್ಥವೇ? ನರೇಂದ್ರ ಮೋದಿ ಸರ್ಕಾರ ಅಸಮರ್ಥವೇ? ಎಂದು ತಾಳೆ ಹಾಕಿ ಎಂದರು.

ವಿಜಯಪುರ ಜಿಲ್ಲೆಗೆ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಯಾವುದೇ ಯೋಜನೆಗಳನ್ನು ಕೊಟ್ಟಿಲ್ಲ. ಯುವಕರ ನಿರುದ್ಯೋಗ ಸಮಸ್ಯೆ ನಿವಾರಿಸಿದ್ದೀರಾ? ರೈತರು ನೆಮ್ಮದಿಯಿಂದ ಬದುಕಿದ್ದಾರಾ? ಮಹಿಳೆಯರಿಗೆ ರಕ್ಷಣೆ ಇದೆಯಾ? ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು ಪ್ರಾಮಾಣಿಕವಾಗಿ ರಾಜ್ಯದ ಜನತೆಗೆ ತಲುಪಲೇ ಇಲ್ಲ. ಬರೀ ಸುಳ್ಳುಗಳನ್ನು ಹೇಳುವ ಮಹಾನ್ ಮೋಸಗಾರ ಎಂದು ಹರಿಹಾಯ್ದರು.

ಹಣ ನಮ್ಮದು ಪ್ರಚಾರ ಅವರದ್ದು
ಆಯುಷ್ಮಾನ್ ಭಾರತ ಕಾರ್ಡ್‌ಗೆ ನರೇಂದ್ರ ಮೋದಿ ೋಟೊ ಹಾಕಿ ಕಳಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರವೇ ಈ ಯೋಜನೆಗೆ 900 ಕೋಟಿ ರೂ. ನೀಡುತ್ತಿದೆ. ನರೇಂದ್ರ ಮೋದಿ ಸರ್ಕಾರ 350 ಕೋಟಿ ರೂ. ಕೊಡುತ್ತಿದೆ. ಆದರೆ ಕಾರ್ಡ್ ಮೇಲೆ ಮೋದಿ ಅವರ ಫೋಟೊ ಹಾಕಿಕೊಂಡು ಅವರು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದರು.

ಪ್ರತಿ ಗ್ರಾಮಕ್ಕೂ ಕುಡಿವ ನೀರು
ತೀವ್ರ ಬರಗಾಲದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಗೆ ಪೈಲಟ್ ಪ್ರಾಜೆಕ್ಟ್ ಅಡಿ ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆಯೊಂದನ್ನು ಆರಂಭಿಸುತ್ತಿದ್ದು, ಜಿಲ್ಲೆಯ ಪ್ರತಿ ಗ್ರಾಮಗಳ ಪ್ರತಿ ಮನೆ ಮನೆಗೆ ನೀರು ಪೂರೈಸಲು ಯೋಜನೆ ಆರಂಭಿಸುತ್ತಿದ್ದೇವೆ. ಜಿಲ್ಲೆಯ ಹಲವಾರು ರಸ್ತೆಗಳು, ಹೊಸ ಶಾಲೆ ಕಟ್ಟಡಗಳಿಗೆ 4300 ಕೋಟಿ ರೂ. ಗಳನ್ನು 10 ತಿಂಗಳಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಿ ಹಣ ಬಿಡುಗಡೆ ಮಾಡುತ್ತಿದ್ದೇವೆ. ದ್ರಾಕ್ಷಿ ಬೆಳೆಗಾರರಿಗೆ ಸಹಾಯ ಧನ ಕೊಡಲು 150 ಕೋಟಿ ರೂ., ಸಾಲಮನ್ನಾ ಯೋಜನೆಯಡಿ 375 ಕೋಟಿ ರೂ. ಪ್ರಯೋಜನ ಹಾಗೂ ರೈತ ಬೆಳೆಯುತ್ತಿರುವ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಸಾಗಣೆ ವೆಚ್ಚ ಸರ್ಕಾರವೇ ನೀಡುವ ಯೋಜನೆ ಆರಂಭಿಸಲಾಗುವುದು. ರೈತರ ಬೆಳೆಗಳನ್ನು ದಾಸ್ತಾನು ಮಾಡುವ ಉಗ್ರಾಣಗಳ ಬಾಡಿಗೆ ಹಣವನ್ನು ಸರ್ಕಾರವೇ ಪಾವತಿಸುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

Leave a Reply

Your email address will not be published. Required fields are marked *