ಮುಖ್ಯ ಶಿಕ್ಷಕರ ಅಮಾನತಿಗೆ ಒತ್ತಾಯ

ಮುದ್ದೇಬಿಹಾಳ: ತಾಲೂಕಿನ ಬಳಬಟ್ಟಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಪಿ.ಕೆ. ರಾಠೋಡ ಅವರು ಗ್ರಾಮಸ್ಥರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದು, ತಮ್ಮ ಮೇಲೆ ಬಿಇಒ ಕಾನೂನಾತ್ಮಕವಾಗಿ ಯಾವುದೇ ಕ್ರಮ ಜರುಗಿಸಲು ಬರುವುದಿಲ್ಲ ಎಂದು ಉತ್ತರಿಸುವ ಮುಖ್ಯ ಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸ ಬೇಕು ಎಂದು ಗ್ರಾಮಸ್ಥರು ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ಬಿಇಒ ಹಾಗೂ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿ ತಹಸೀಲ್ದಾರ್‌ಗೆ ಹಾಗೂ ಬಿಇಒಗೆ ಮನವಿ ಸಲ್ಲಿಸಿದ ಎಸ್‌ಡಿಎಂಸಿ ಅಧ್ಯಕ್ಷ ಎಸ್.ವೈ. ಬೋಳಿ ಹಾಗೂ ಪದಾಧಿಕಾರಿಗಳು ಮಾತನಾಡಿ, ಶಾಲೆಯಲ್ಲಿ ಅತಿಥಿ ಶಿಕ್ಷಕರೆಂದು ಸೇವೆ ಸಲ್ಲಿಸಿದ ಎಸ್.ಸಿ. ಬೀಳಗಿ ಅವರ ವೇತನ ಶಾಲೆಯ ಖಾತೆಗೆ ಜಮೆಯಾಗಿದ್ದರೂ ಇಲ್ಲದ ಸಬೂಬು ಹೇಳಿ ಅವರ ವೇತನ ಪಾವತಿಸಲು ವಿಳಂಬ ಮಾಡುತ್ತಿದ್ದಾರೆ. ಅಲ್ಲದೇ ವೇತನ ಪಾವತಿಸಲು ಹಣದ ಬೇಡಿಕೆ ಇಟ್ಟಿದ್ದಾರೆ. ಶಾಲೆಗೆ ಯಾವುದೇ ಅನುದಾನ ಬಂದರೂ ತಮಗೆ ತಿಳಿಸುವುದಿಲ್ಲ. ಅದರ ಬಗ್ಗೆ ವಿಚಾರಿಸಿದರೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇಂತಹ ಮುಖ್ಯ ಶಿಕ್ಷಕ ನಮ್ಮ ಶಾಲೆಗೆ ಅವಶ್ಯಕತೆ ಇಲ್ಲ. ಕೂಡಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಅತಿಥಿ ಶಿಕ್ಷಕ ಎಸ್.ಸಿ. ಬೀಳಗಿ ಅವರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಮನವಿ ಮಾಡಿದರು. ಒಂದು ವೇಳೆ ಕ್ರಮ ಜರುಗಿಸದಿದ್ದರೆ ಕಚೇರಿ ಎದುರಿಗೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

ಮನವಿಗೆ ಗ್ರಾಮದ ಅಪ್ಪಣ್ಣ ಕಲಾದರಗಿ, ಅಶೋಕ ಆಲೂರ, ಸಿದ್ದಪ್ಪ ಹಟ್ಟಿ, ಎಸ್.ಎಸ್. ಹೊಕ್ರಾಣಿ, ಆರ್.ಎಸ್. ಪಾಟೀಲ, ನಿಂಗಪ್ಪ ಕೊಪ್ಪ, ತಿಪ್ಪಣ್ಣ ಹುಗ್ಗಿ, ವೈ.ಎಲ್. ಗೋಣಿ, ರಮೇಶ ಪೂಜಾರಿ ಇನ್ನಿತರರು ಸಹಿ ಮಾಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ. ಗಾಂಜಿ ಹಾಗೂ ತಹಸೀಲ್ದಾರ್ ವಿನಯಕುಮಾರ ಪಾಟೀಲ ಅವರು ಮನವಿ ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಅಪರ ಆಯುಕ್ತರಿಗೆ ಪತ್ರ
ಬಳಬಟ್ಟಿ ಶಾಲೆ ಮುಖ್ಯ ಶಿಕ್ಷಕ ಪಿ.ಕೆ. ರಾಠೋಡ ಶಾಲಾ ವಿದ್ಯಾರ್ಥಿನಿಯಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಅಸಭ್ಯವಾಗಿ ನಡೆದುಕೊಂಡಿದ್ದು, ಅವರಿಗೆ ಒಮ್ಮೆ ಬುದ್ಧಿವಾದ ಹೇಳಿ ಬಿಡಲಾಗಿತ್ತು. ಆದರೆ, ಮತ್ತೆ ಅದೇ ಚಾಳಿ ಮುಂದುವರಿಸಿದ್ದು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಯಲಗೂರ ತಾಪಂ ಸದಸ್ಯೆ ಮಹಾದೇವಿ ಕುಮಟಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಏ.9 ರಂದು ಪತ್ರ ಬರೆದಿದ್ದಾರೆ.

2018-19ನೇ ಸಾಲಿನಲ್ಲಿ 13 ವಿದ್ಯಾರ್ಥಿಗಳಿಂದ ರಸೀದಿ ನೀಡದೇ ಉತ್ತಮ ಲಿತಾಂಶ ಮಾಡಿಸುತ್ತೇನೆಂದು ಒತ್ತಾಯಪೂರ್ವಕ ಹಣ ವಸೂಲಿ ಮಾಡಿ ಆ ಹಣವನ್ನು ಶಾಲೆಯ ಅಭಿವೃದ್ಧಿಗೆ ಬಳಸದೇ ದುರುಪಯೋಗ ಮಾಡಿಕೊಂಡಿದ್ದಾರೆ. ಶಾಲೆಯಲ್ಲಿ ಆಚರಿಸುವ ಮಹಾತ್ಮರ ಜಯಂತ್ಯುತ್ಸವಗಳನ್ನು ಸರಿಯಾಗಿ ಆಚರಿಸದೇ ಅನುದಾನವಿಲ್ಲ ಎಂದು ಹೇಳುತ್ತಾರೆ ಎಂದು ತಿಳಿಸಿದ್ದಾರೆ.

ಶಾಲೆಯ ಎಲ್ಲ ಶೌಚಗೃಹಗಳು ನೀರಿಲ್ಲದೇ ಗಬ್ಬು ನಾರುತ್ತಿದ್ದು, ಹೆಣ್ಣು ಮಕ್ಕಳು ಬಳಸಲು ಯೋಗ್ಯವಿಲ್ಲದಂತಾಗಿವೆ. ‘ಶಾಲೆಯ ಕುಡಿವ ನೀರಿನ ಟ್ಯಾಂಕರ್ ಒಳಗಡೆ ಧೂಳು, ಕ್ರಿಮಿ ಕೀಟಗಳಿದ್ದು ಟ್ಯಾಂಕ್ ಸ್ವಚ್ಛತೆಗೆ ಹಣ ಇಲ್ಲ ನೋಡ್ತಿನಿ ಬಿಡ್ರಿ, ನೀರು ಕುಡಿದ್ರ ಯಾರು ಸಾಯೋದಿಲ್ಲ’ ಎಂದು ನಿರ್ಲಕ್ಷೃದಿಂದ ಮಾತನಾಡುತ್ತಾರೆ. ಶಾಲೆಗೆ ಅನಧಿಕೃತ ಗೈರು ಉಳಿದು ಸಹಿ ಮಾಡುವುದು. 2019ನೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮಯದಲ್ಲಿ ಆರು ದಿನ ಮಕ್ಕಳ ಹಾಜರಾತಿ ಹಾಕಿ ಮಕ್ಕಳಿಗೆ ಊಟ ಹಾಕಿಲ್ಲ ಎಂದು ದೂರಿದ್ದು ಅವರನ್ನು ಅಮಾನತುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.