ಶಾಲೆ ದುರಸ್ತಿಗೆ ಒತ್ತಾಯ

ಮುದ್ದೇಬಿಹಾಳ: ತಾಲೂಕಿನ ಕೋಳೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ಕಾರ್ಯಕ್ರಮ ಮುಕ್ತಾಯದ ಬಳಿಕ ಅಲ್ಪೋಪಾಹಾರ ಸೇವನೆಗೆ ತೆರಳುತ್ತಿದ್ದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರಿಗೆ ಗ್ರಾಮಸ್ಥರು ಶಾಲೆ ಹಾಗೂ ಕುಡಿವ ನೀರಿನ ಸಮಸ್ಯೆ ಗಮನಕ್ಕೆ ತಂದರು.
ಗ್ರಾಮಸ್ಥರು ಮಾತನಾಡಿ, ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಕಚೇರಿ ಹೊರಗಿನ ಕಂಬಗಳು ಶಿಥಿಲಗೊಂಡಿದ್ದು, ದುರಸ್ತಿ ಮಾಡಬೇಕು. ಮಳೆ ಬಂದರೆ ಕೊಠಡಿಯಲ್ಲಿ ನೀರು ಸೋರುತ್ತದೆ ಎಂದು ದೂರಿದರು.
ಅಲ್ಲದೆ ನಾಗರಬೆಟ್ಟ ಗ್ರಾಮದ ಬಹುಹಳ್ಳಿ ಕುಡಿವ ನೀರಿನ ಯೋಜನೆಯಡಿ ಕೋಳೂರಿಗೆ ನೀರು ಬರುವುದಿಲ್ಲ. ಮುದ್ನಾಳ ಕ್ರಾಸ್ ಬಳಿ ಹೊಸದಾಗಿ ಬಹುಹಳ್ಳಿ ಕುಡಿವ ನೀರಿನ ಯೋಜನೆಯ ಘಟಕ ನಿರ್ಮಿಸುತ್ತಿದ್ದಾರೆ. ಅಲ್ಲಿಂದ ಕೋಳೂರು ತಾಂಡಾ ಹಾಗೂ ಕೋಳೂರು ಗ್ರಾಮಕ್ಕೆ ನೀರು ಪೂರೈಸಲು ಶಾಸಕರು ಸಂಬಂಧಿಸಿದ ಇಲಾಖೆಗೆ ಪತ್ರ ಬರೆದು ಸೂಚಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು, ಕುಡಿವ ನೀರಿನ ವಿಷಯದಲ್ಲಿ ಮೊದಲ ಆದ್ಯತೆ ಮೇರೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು. ಅಲ್ಲದೆ ಶಾಲೆ ಕೊಠಡಿಗಳು ಶಿಥಿಲಗೊಂಡ ಕುರಿತು ತಾಲೂಕಿನ ಎಲ್ಲ ಶಾಲೆಗಳ ಸ್ಥಿತಿಗತಿ ವರದಿಯನ್ನು ತಮಗೆ ಸಲ್ಲಿಸುವಂತೆ ಬಿಇಒ ಎಸ್.ಡಿ. ಗಾಂಜಿ ಅವರಿಗೆ ಶಾಸಕರು ಸೂಚಿಸಿದರು.
ತಾಪಂ ಪ್ರಭಾರಿ ಇಒ ಪ್ರಕಾಶ ದೇಸಾಯಿ, ಪಿಡಿಓ ನಿರ್ಮಲಾ ತೋಟದ, ಪಿ.ಎಸ್. ನಾಯ್ಕೋಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಗ್ರಾಮದ ಮುಖಂಡರಾದ ಅಲಬಯ್ಯ ಹಿರೇಮಠ, ಸಿದ್ದನಗೌಡ ಪಾಟೀಲ, ಶರಣಪ್ಪ ಕತ್ತಿ, ಬಸಲಿಂಗಪ್ಪ ಬಿದರಕುಂದಿ, ಲಕ್ಷ್ಮಣ ಲಮಾಣಿ, ಶಾಂತು ಮೇಲ್ಮನಿ, ಲಕ್ಷ್ಮಣ ಬಿಜ್ಜೂರ, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ, ರಾಯನಗೌಡ ಬಿರಾದಾರ, ಕೊಟ್ರಪ್ಪ ಹರನಾಳ, ಶಾಲೆಯ ಮುಖ್ಯಗುರು ಬಿ.ಎಚ್. ನಡುವಿನಮನಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *