ಸಮರ್ಪಕ ನಿರ್ವಹಿಸಿ ಮಕ್ಕಳಿಗೆ ಬಿಸಿಯೂಟ ತಲುಪಿಸಿ

ಮುದ್ದೇಬಿಹಾಳ: ಸರ್ಕಾರದಿಂದ ಅಕ್ಷರ ದಾಸೋಹ ಯೋಜನೆ ಅಡಿ ವಿದ್ಯಾರ್ಥಿಗಳಿಗೆ ನೀಡಲಾಗುವ ಬಿಸಿಯೂಟವನ್ನು ನ್ಯೂನತೆಗಳಿಲ್ಲದೆ ಸಮರ್ಪಕವಾಗಿ ತಲುಪಿಸುವಂತೆ ಅಕ್ಷರ ದಾಸೋಹ ಯೋಜನೆ ನೂತನ ಸಹಾಯಕ ನಿರ್ದೇಶಕ ಸಂಗಮೇಶ ಹೊಲ್ದೂರ ಹೇಳಿದರು.

ಪಟ್ಟಣದ ಜ್ಞಾನ ಭಾರತಿ ಶಾಲೆಯಲ್ಲಿ ಬುಧವಾರ ನಡೆದ ಅಕ್ಷರ ದಾಸೋಹ ಯೋಜನೆಯ ಅನುಷ್ಠಾನದ ಕುರಿತು ತಾಲೂಕಿನ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯಗುರುಗಳ ಸಭೆಯಲ್ಲಿ ಅವರು ಮಾತನಾಡಿದರು.

ಈಚೆಗೆ ಅಡುಗೆ ಸಿಬ್ಬಂದಿ ನೇಮಕ ಹಾಗೂ ತೆಗೆದು ಹಾಕುವ ವಿಚಾರದಲ್ಲಿ ಆಯಾ ಶಾಲೆ ಮುಖ್ಯಗುರು ಹಲವು ಪ್ರಶ್ನೆಗಳನ್ನು ಮಾಡುತ್ತಿದ್ದಾರೆ. ಅರ್ಹ ಇರುವ ಸಿಬ್ಬಂದಿ ನೇಮಕ ಮಾಡಲು ಮೂವರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿ ಕ್ರಮ ಕೈಗೊಳ್ಳುವಂತೆ ಸರ್ಕಾರದ ನಿರ್ದೇಶನವಿದೆ. ಗ್ರಾಪಂ ಅಧ್ಯಕ್ಷ, ಎಸ್​ಡಿಎಂಸಿ ಅಧ್ಯಕ್ಷ ಹಾಗೂ ಶಾಲೆ ಮುಖ್ಯಗುರು ಈ ಸಮಿತಿಯಲ್ಲಿ ಇರುತ್ತಾರೆ ಎಂದು ಹೇಳಿದರು.

ಬಿಸಿಯೂಟ ಯೋಜನೆ ಅಡಿ ಪೂರೈಕೆಯಾಗುವ ಆಹಾರ ಧಾನ್ಯಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಅಡುಗೆ ಸಿಬ್ಬಂದಿ ಆರೋಗ್ಯದ ಕಡೆ ನಿಗಾ ವಹಿಸಬೇಕು. ವಿದ್ಯಾರ್ಥಿಗಳ ಹಾಜರಾತಿ ಅನುಗುಣವಾಗಿ ಬಿಸಿಯೂಟ ತಯಾರಿಸಬೇಕು. ಪ್ರತಿ ತಿಂಗಳ 20ನೇ ತಾರೀಖಿನೊಳಗೆ ಇಂಡೆಂಟ್​ಗೆ ಪತ್ರ ನೀಡಬೇಕು ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಂ. ಬೆಳಗಲ್ ಮಾತನಾಡಿ, ಸದ್ಯಕ್ಕೆ ಸರ್ಕಾರದಿಂದ ಒಂದೇ ಅರ್ಜಿಯಲ್ಲಿ ಎಲ್ಲ ಶಿಷ್ಯವೇತನಗಳಿಗೆ ಅರ್ಜಿ ಹಾಕಲು ಅವಕಾಶ ಕಲ್ಪಿಸಿದ್ದು,

ವಿಜಯಪುರ ಜಿಲ್ಲೆಯಲ್ಲಿ ಮುದ್ದೇಬಿಹಾಳ ತಾಲೂಕು ಶೇ.74 ರಷ್ಟು ನೋಂದಣಿ ದಾಖಲಿಸಿ

ಎರಡನೇ ಸ್ಥಾನದಲ್ಲಿದೆ. ಗುರುಚೇತನ ಹೆಸರಿನಲ್ಲಿ ಶಿಕ್ಷಕರು ಕಲಿಯಬಯಸುವ ವಿಷಯದ

ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಬಿ.ಎಚ್. ನಡುವಿನಮನಿ, ಬಿ.ಎಸ್. ಶೇಖರಣ್ಣವರ, ಶಾಂತಾ ಭಟ್, ಎಸ್.ಎಸ್.ಹಿರೇಮಠ, ಸಂಗಮೇಶ ಸಜ್ಜನ ಇದ್ದರು. ತಾಲೂಕಿನ 17 ಸಿಆರ್​ಸಿಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಖ್ಯಗುರುಗಳು ಪಾಲ್ಗೊಂಡಿದ್ದರು. ಟಿ.ಡಿ. ಲಮಾಣಿ ನಿರೂಪಿಸಿದರು.