ಮೀಸಲಾತಿ ಕೈಗೆ ಅಧಿಕಾರ ಗದ್ದುಗೆ

ಶಂಕರ ಈ.ಹೆಬ್ಬಾಳ ಮುದ್ದೇಬಿಹಾಳ

ಸ್ಥಳೀಯ ಪುರಸಭೆ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, 23 ಸಂಖ್ಯಾಬಲದಲ್ಲಿ ಕಾಂಗ್ರೆಸ್, ಬಿಜೆಪಿ ತಲಾ 8ರಲ್ಲಿ ಹಾಗೂ ಇಬ್ಬರು ಜೆಡಿಎಸ್, ಐವರು ಪಕ್ಷೇತರರು ಜಯಗಳಿಸಿದ್ದಾರೆ.

ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ನಿರೀಕ್ಷೆಯಂತೆ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಪುರಸಭೆ ಗದ್ದುಗೆ ಹಿಡಿಯಲು ಪಕ್ಷೇತರರ ಎದುರು ಮಂಡಿಯೂರುವ ಪರಿಸ್ಥಿತಿ ನಿರ್ವಣವಾಗಿತ್ತಾದರೂ ತಡರಾತ್ರಿ ಪ್ರಕಟಗೊಂಡ ಮೀಸಲಾತಿ ಕಾಂಗ್ರೆಸ್​ಗೆ ಅಧಿಕಾರ ನೀಡಲು ಅವಕಾಶ ಕಲ್ಪಿಸಿದೆ.

ವಾರ್ಡ್ ಸಂಖ್ಯೆ 1, 3, 4, 7, 8, 17, 22, 23 ರಲ್ಲಿ ಬಿಜೆಪಿ ಅಭ್ಯರ್ಥಿಗಳು ವಿಜಯ ಸಾಧಿಸಿದ್ದರೆ, ವಾರ್ಡ್ ಸಂಖ್ಯೆ 2, 6, 10, 12, 13, 14, 18, 20 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ವಾರ್ಡ್ ಸಂಖ್ಯೆ 15 ಹಾಗೂ 16ರಲ್ಲಿ ಮಾತ್ರ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ ಪಕ್ಷೇತರರು ವಾರ್ಡ್ ಸಂಖ್ಯೆ 5, 9, 11, 19, 21ರಲ್ಲಿ ವಿಜಯದ ನಗು ಬೀರಿದ್ದಾರೆ.

ಏತನ್ಮಧ್ಯೆ ಪಕ್ಷೇತರರ ಪ್ರಾಬಲ್ಯಕ್ಕೆ ಶಕ್ತಿ ಮೀರಿ ಕಡಿವಾಣ ಹಾಕಲು ಮುಂದಾಗಿದ್ದ ಮೂರು ಪಕ್ಷದ ನಾಯಕರ ತೀರ್ವನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಮಾಧಾನದ ಫಲಿತಾಂಶ ದೊರಕಿದ್ದರೆ ಜೆಡಿಎಸ್ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವಲ್ಲಿ ಹಿಂದೆ ಬಿದ್ದಿದೆ. ಕಳೆದ ಬಾರಿ ಜೆಡಿಎಸ್ 6 ಸ್ಥಾನಗಳಲ್ಲಿ ಗೆದ್ದಿದ್ದ ಜೆಡಿಎಸ್​ಗೆ ಈ ಬಾರಿ 4 ಸ್ಥಾನಗಳಲ್ಲಿ ನಷ್ಟವಾಗಿವೆ. ಒಂದೇ ಒಂದು ಸ್ಥಾನದಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ 8 ಸ್ಥಾನಗಳಲ್ಲಿ ಗೆಲುವು ಕಂಡಿದ್ದು 7 ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲು ಯಶಸ್ವಿಯಾಗಿದೆ. ಕಳೆದ ಬಾರಿ ಕಾಂಗ್ರೆಸ್ 4 ಇದ್ದದ್ದು ಈ ಬಾರಿ ಪ್ಲಸ್ 4 ಆಗಿದ್ದು, ಎಂಟು ಅಭ್ಯರ್ಥಿಗಳು ಗೆದ್ದು ಕಾಂಗ್ರೆಸ್ ಫಲಿತಾಂಶದಲ್ಲಿ ಸುಧಾರಣೆ ಕಂಡಿದ್ದಾರೆ. 12 ಸ್ಥಾನಗಳಲ್ಲಿ ಕಳೆದ ಬಾರಿ ಗೆಲುವು ಸಾಧಿಸಿದ್ದ ಪಕ್ಷೇತರರು ಈ ಬಾರಿ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಐದು ಮತದಿಂದ ಗೆಲುವು: ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲೆ ವಾರ್ಡ್ ಸಂಖ್ಯೆ 17ರಲ್ಲಿ ಬಿಜೆಪಿಯ ಹಿರಿಯ ಅಭ್ಯರ್ಥಿ 83 ವರ್ಷದ ಚೆನ್ನಪ್ಪ ಕಂಠಿ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಹರೀಶ ಬೇವೂರ ಕೇವಲ 5 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು ಕಂಠಿಗೆ ಪ್ರಯಾಸದ ಗೆಲುವು ಸಿಕ್ಕಿದೆ.

ನಿಜವಾದ ವಿಜಯವಾಣಿ ಸಮೀಕ್ಷೆ: ಮತಗಟ್ಟೆ ಸಮೀಕ್ಷೆಗಳ ಪ್ರಕಾರ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ 6ರಿಂದ 8 ರಲ್ಲಿ ಗೆಲುವು ಸಾಧಿಸಲಿದೆ ಎಂದು ನಿರೀಕ್ಷಿಸಿದ್ದು 8 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಬಿಜೆಪಿ 5ರಿಂದ 7ಎಂದು ತಿಳಿಸಿದ್ದು, ಒಂದು ಹೆಚ್ಚು ಸ್ಥಾನ ಪಡೆದಿದ್ದು ಎಂಟರಲ್ಲಿ ಜಯಗಳಿಸಿದೆ. ಜೆಡಿಎಸ್​ಗೆ 3-4 ಸ್ಥಾನ ನಿರೀಕ್ಷಿತ ಎಂದು ಮಾಡಿದ್ದ ಅಂದಾಜಿನಲ್ಲಿ 2 ಸ್ಥಾನ ಲಭಿಸಿದೆ. ಅತಂತ್ರ ಪುರಸಭೆ ಸಾಧ್ಯತೆ ಬಗ್ಗೆ ಸಮೀಕ್ಷೆಯಲ್ಲಿ ತಿಳಿಸಲಾಗಿದ್ದು ಅದು ನಿಜವಾಗಿದೆ. ನೇರ ಸ್ಪರ್ಧೆ ಎಂದು ತಿಳಿಸಲಾಗಿದ್ದ 1, 2, 7, 8, 10, 13, 14 ನೇ ವಾರ್ಡಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯ ನೇರ ಪೈಪೋಟಿ ಎಂದು ತಿಳಿಸಿದ್ದು, ನಿರೀಕ್ಷಿತ ಫಲಿತಾಂಶ ಲಭ್ಯವಾಗಿದೆ. 15 ಹಾಗೂ 16 ನೇ ವಾರ್ಡಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮಧ್ಯ ಇದ್ದ ಪೈಪೋಟಿಯಲ್ಲಿ ಎರಡೂ ಸ್ಥಾನ ಜೆಡಿಎಸ್​ಗೆ ದಕ್ಕಿದ್ದರೆ, 17ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಎದುರು 5 ಮತಗಳ ರೋಚಕ ಗೆಲುವು ಪಡೆದಿದ್ದಾರೆ. ವಾರ್ಡ್ 19, 20 ಹಾಗೂ 21ನೇ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷೇತರರ ಮಧ್ಯ ನೇರ ಸ್ಪರ್ಧೆ ಇದ್ದು, ಅದರಲ್ಲಿ 20ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಸಿದ್ದರೆ 19, 21ರಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಸಾಧಿಸಿದ್ದಾರೆ. ಇದ್ದು 22ನೇ ವಾರ್ಡಿನಲ್ಲಿ ಜೆಡಿಎಸ್ ಬಿಜೆಪಿ ಮಧ್ಯೆ ನೇರ ಹಣಾಹಣಿ ಇದ್ದು ಜೆಡಿಎಸ್ ಗೆಲ್ಲುವ ಫೆವರಿಟ್ ಎನ್ನಿಸಿತ್ತು. ಆದರೆ, 9 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಜೆಡಿಎಸ್​ಗೆ ಸೋಲಿನ ರುಚಿ ತೋರಿಸಿದ್ದಾರೆ.