ನೂರೊಂದು ವಿದ್ಯಾರ್ಥಿಗಳ ಕಲಿಕೆಗೆ ಒಂದೇ ಕೊಠಡಿ…!

ಶಂಕರ ಈ.ಹೆಬ್ಬಾಳ

ಮುದ್ದೇಬಿಹಾಳ: ಎಂಟು ವರ್ಗಗಳಿಗೆ ಕನಿಷ್ಠ ನಾಲ್ಕು ಕೊಠಡಿಗಳಿದ್ದರೂ ಸಾಕು ವಿದ್ಯಾರ್ಥಿಗಳ ವೈಯಕ್ತಿಕ ಕಲಿಕೆ ಕಡೆಗೆ ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗುತ್ತದೆ. ಆದರೆ ಒಂದೇ ಒಂದು ಕೊಠಡಿಯಲ್ಲಿ ಎಂಟು ವರ್ಗಗಳನ್ನು ನಡೆಸಬೇಕಾದ ಅನಿವಾರ್ಯತೆ ತಾಲೂಕಿನ ದೇವೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಬಂದೊದಗಿದೆ.

ಯಾಕೆ ಈ ಪರಿಸ್ಥಿತಿ?: ದೇವೂರ ಗ್ರಾಮದಲ್ಲಿ ಕಳೆದ ಜುಲೈ-ಆಗಸ್ಟ್ ಅಂತ್ಯದಲ್ಲಿ ಕೃಷ್ಣಾ ನದಿ ಪ್ರವಾಹ ಬಂದ ಕಾರಣ ಹಳೆಯ ಶಾಲೆಯ ಕೊಠಡಿಗಳು ಶಿಥಿಲಗೊಂಡಿದ್ದು, ಇರುವ ಒಂದೇ ಒಂದು ಪ್ರಾಥಮಿಕ ಶಾಲೆ ಕೊಠಡಿಯಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಬೇಕಾಗಿದೆ. 7-8 ವರ್ಷಗಳಿಂದ ಈ ಗ್ರಾಮದ ಒಂದೇ ಒಂದು ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಬೇಕಾದ ಅನಿವಾರ್ಯತೆಯಲ್ಲಿ ಗ್ರಾಮಸ್ಥರದ್ದು,ಶಿಕ್ಷಕರದ್ದಾಗಿದೆ.

ಶಾಲೆಗೆ ವಿದ್ಯಾರ್ಥಿಗಳ ಕೊಕ್: ದೇವೂರ ಗ್ರಾಮದಲ್ಲಿ ಕಲಿಕೆಗೆ ಶಾಲಾ ಕೊಠಡಿಗಳ ಕೊರತೆ ಹಾಗೂ ಸೌಲಭ್ಯಗಳ ಅಲಭ್ಯತೆಯಿಂದಾಗಿ ಗ್ರಾಮದಿಂದ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪಟ್ಟಣದತ್ತ ಮುಖ ಮಾಡಿದ್ದಾರೆ. 2015ರಲ್ಲಿ 160ರಷ್ಟು ಇದ್ದ ವಿದ್ಯಾರ್ಥಿಗಳ ಸಂಖ್ಯೆ ಇದೀಗ 101ಕ್ಕೆ ಬಂದು ತಲುಪಿದೆ. ಇಲ್ಲಿ ಒಟ್ಟು ಆರು ಜನ ಶಿಕ್ಷಕರಿದ್ದಾರೆ. ಒಂದನೇ ತರಗತಿಗೆ 9, ಎರಡನೇ ತರಗತಿಗೆ 18, ಮೂರನೇ ತರಗತಿಗೆ 14, ನಾಲ್ಕನೇ ತರಗತಿಗೆ 14, ಐದನೇ ತರಗತಿಗೆ 13, ಆರನೇ ತರಗತಿಗೆ 26, ಏಳನೇ ತರಗತಿಗೆ 7 ಹಾಗೂ ಎಂಟನೇ ತರಗತಿಗೆ 16 ವಿದ್ಯಾರ್ಥಿಗಳು ಅಕ್ಷರಾಭ್ಯಾಸ ಮಾಡುತ್ತಿದ್ದಾರೆ.

ಒಂದೇ ಕೊಠಡಿಯಲ್ಲಿ ಎಲ್ಲವೂ: ಶಾಲೆಯ ಒಂದೇ ಒಂದು ಕೊಠಡಿಯಲ್ಲಿ ಆರು ವರ್ಗಗಳನ್ನು ಹೊರಗಡೆ ಎರಡು ವರ್ಗಗಳನ್ನು ನಡೆಸಲಾಗುತ್ತಿದೆ. ನಲಿಕಲಿ ಹಾಗೂ ಎಂಟನೇ ತರಗತಿ ವಿದ್ಯಾರ್ಥಿಗಳು ಸ್ವತಂತ್ರವಾಗಿ ಕಲಿಯುವುದು ಇಲ್ಲಿ ಸಾಧ್ಯವಾಗುತ್ತಿಲ್ಲ. ಬಿಸಿಯೂಟದ ಆಹಾರ ಧಾನ್ಯದ ಸಾಮಗ್ರಿ, ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಕುಳಿತುಕೊಳ್ಳಲು, ಶಾಲೆಯ ದಾಖಲೆಗಳನ್ನು ಸಂಗ್ರಹಿಸಿಡುವ ಟ್ರೆಜರಿಗಳು ಇದೇ ಕೊಠಡಿಯಲ್ಲಿಯೇ ಇರಿಸಲಾಗಿದ್ದು, ಒಬ್ಬರ ಪಾಠ ಮತ್ತೊಬ್ಬರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ.

ಶಾಲೆಗೆ ತಲುಪದ ಅನುದಾನ: ದೇವೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ ಎರಡೆರಡು ಬಾರಿ ಅನುದಾನ ತಗೆದಿಟ್ಟರೂ ಅದಕ್ಕೆ ಅನುಮೋದನೆ ದೊರೆಯದೇ ಜಿಪಂ ಕಚೇರಿಯಲ್ಲಿಯೇ ಕಾಣದ ಕೈಗಳು ಶಾಲೆಯ ಕೊಠಡಿ ನಿರ್ಮಾಣಕ್ಕೆ ಅಡ್ಡಿಯುಂಟಾಗಿವೆ ಎಂಬ ಸಂಗತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಲಗಳೇ ಹೇಳುತ್ತಿವೆ.

ಗ್ರಾಮದ ಕೊನೆಯ ಅಂಚಿನಲ್ಲಿರುವ ಹಳೆಯ ಶಾಲೆಯನ್ನು ನೆಲಸಮ ಮಾಡಿ ಅಲ್ಲಿಯೇ ಎರಡು ಕೊಠಡಿಗಳನ್ನು ನಿರ್ಮಿಸಲು ಮಂಜೂರಾತಿ ಸಿಕ್ಕಿದೆ ಎನ್ನುವ ಮಾಹಿತಿ ಇಂಜಿನಿಯರ್ ತಿಳಿಸಿದ್ದಾರೆ. ಸದ್ಯಕ್ಕೆ ದಕ್ಷಿಣ ದಿಕ್ಕಿನಲ್ಲಿರುವ ಶಾಲೆಯ ಬಾಗಿಲನ್ನು ಉತ್ತರಾಭಿಮುಖವಾಗಿ ನಿರ್ಮಿಸಿ ಕಾಂಪೌಂಡ್ ಎತ್ತರಿಸಿದರೆ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಲಿದೆ. ತುಂಬಾ ಇಕ್ಕಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣ ಕಲಿಸುವಂತಾಗಿದೆ.
ಸಿ.ಬಿ.ಚಿತ್ತರಗಿ, ಮುಖ್ಯಗುರು, ಎಚ್.ಪಿ.ಎಸ್., ದೇವೂರ

ದೇವೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ಕೊಠಡಿಗಳನ್ನು ಶಾಸಕರ ಅನುದಾನದಲ್ಲಿ ನಿರ್ಮಿಸಲು 21.20 ಲಕ್ಷ ರೂ. ಮಂಜೂರಾತಿ ಸಿಕ್ಕಿದೆ. ಒಂದು ಕೊಠಡಿಯನ್ನು ಶಿಕ್ಷಣ ಇಲಾಖೆ ಅನುದಾನದಿಂದ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದ್ದೇವೆ. ಗ್ರಾಮದಲ್ಲಿರುವ ಹಳೆಯ ಶಾಲೆಯನ್ನು ನೆಲಸಮ ಮಾಡಿ ಅಲ್ಲಿಯೇ ಎರಡು ಕೊಠಡಿಗಳನ್ನು ನಿರ್ಮಿಸಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಕಲ್ಪಿಸಿಕೊಡಲಾಗುವುದು.
ಎಸ್.ಡಿ.ಗಾಂಜಿ, ಬಿಇಒ

Leave a Reply

Your email address will not be published. Required fields are marked *