ಮುದ್ದೇಬಿಹಾಳ ಕ್ಷೇತ್ರದಲ್ಲಿ ಆರು ಸಾವಿರ ಸದಸ್ಯತ್ವ ಗುರಿ

ಮುದ್ದೇಬಿಹಾಳ: ಮತಕ್ಷೇತ್ರದಲ್ಲಿರುವ 239 ಬೂತ್​ಗಳಲ್ಲಿ ಮತದಾರರನ್ನು ಪಕ್ಷದ ಸದಸ್ಯರನ್ನಾಗಿಸಿಕೊಳ್ಳುವ ಉದ್ದೇಶದಿಂದ ಶಕ್ತಿ ಅಭಿಯಾನ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಜಲಜಾ ನಾಯಕ ಹೇಳಿದರು.

ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಪಕ್ಷ ಬಲಿಷ್ಠವಾಗಿದ್ದು, ಜನರ ಬಳಿ ಪಕ್ಷದ ನಾಯಕರನ್ನು ಕೊಂಡೊಯ್ಯಲು ಸದಸ್ಯರನ್ನಾಗಿಸಿಕೊಳ್ಳಲಾಗುತ್ತದೆ. ಕಾಂಗ್ರೆಸ್ ಸರ್ಕಾರ ವಿರುವ ರಾಜ್ಯಗಳಲ್ಲಿ ಜನರಿಗೆ ಸರ್ಕಾರಿ ಸೌಲಭ್ಯಗಳ ಮಾಹಿತಿ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಶಕ್ತಿ ಕಾರ್ಯಕ್ರಮ ಆಮೆಗತಿಯಲ್ಲಿದೆ. ಆರು ಸಾವಿರ ಸದಸ್ಯರ ನೋಂದಣಿಗೆ ಗುರಿ ನೀಡಲಾಗಿದ್ದು, ಇಲ್ಲಿವರೆಗೆ 300 ಜನರ ಸದಸ್ಯತ್ವ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಡಿ.15ರವರೆಗೆ ಈ ಅಭಿಯಾನ ನಡೆಯಲಿದ್ದು, ಮತದಾರರು ಹಾಗೂ ಕಾಂಗ್ರೆಸ್ ಮುಖಂಡರ ಮಧ್ಯ ಸಂಪರ್ಕ ಏರ್ಪಡಲಿ ಎಂಬ ಉದ್ದೇಶದಿಂದ ಕಾಂಗ್ರೆಸ್ ಯುವ ಘಟಕ, ಎನ್​ಎಸ್​ಯುುಐ, ಐಟಿಬಿಟಿ ಸೆಲ್​ಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು. ಮುಖಂಡರಾದ ಕಾಂತಾ ನಾಯಕ, ಎಚ್.ಬಿ. ಮುರಾರಿ ಮಾತನಾಡಿ, ಸದಸ್ಯತ್ವ ಮಾಡಿಕೊಳ್ಳುವಲ್ಲಿ ವಿಜಯಪುರ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಮನೋಹರ ಐನಾಪುರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ, ಜಿಲ್ಲಾಧ್ಯಕ್ಷೆ ಮಹಾದೇವಿ ಗೋಕಾಕ, ಮಲ್ಲಿಕಾರ್ಜುನ ತೊರವಿ, ಶಕೀಲ್ ಗಡೇದ, ಎಪಿಎಂಸಿ ಅಧ್ಯಕ್ಷ ಗುರು ತಾರನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲಗಫುರ್ ಮಕಾನದಾರ್,ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ, ಸೋನಾಬಾಯಿ ನಾಯಕ, ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ಸದಸ್ಯ ಎಚ್.ಬಿ. ಸಾಲಿಮನಿ, ವೈ.ಎಚ್. ವಿಜಯಕರ್, ಹುಸೇನ್ ಮುಲ್ಲಾ, ಗೋಪಿ ಮಡಿವಾಳರ, ಯುವ ಘಟಕದ ಅಧ್ಯಕ್ಷ ಮಹ್ಮದ ರಫೀಕ್ ಶಿರೋಳ, ಎನ್​ಎಸ್​ಯುುಐ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ಇನ್ನಿತರರು ಇದ್ದರು.