ಪಂದ್ಯಾವಳಿಯನ್ನು ಹಗುರವಾಗಿ ಪರಿಗಣಿಸದಿರಿ

ಮುದ್ದೇಬಿಹಾಳ: ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲ ದೈಹಿಕ ಶಿಕ್ಷಣ ಉಪನ್ಯಾಸಕರು ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಹೇಳಿದರು.

ಪಟ್ಟಣದ ಅಭ್ಯುದಯ ಪಪೂ ಕಾಲೇಜಿನಲ್ಲಿ ಮಂಗಳವಾರ ಪಪೂ ಶಿಕ್ಷಣ ಇಲಾಖೆ ಹಾಗೂ ಅಭ್ಯುದಯ ಪಪೂ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಅ.28 ಹಾಗೂ 29ರಂದು ನಡೆಯಲಿರುವ ರಾಜ್ಯಮಟ್ಟದ ಪಪೂ ಕಾಲೇಜುಗಳ ವಾಲಿಬಾಲ್ ಪಂದ್ಯಾವಳಿ ಸಿದ್ಧತೆ ಕುರಿತು ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ರಾಜ್ಯಮಟ್ಟದ ಕ್ರೀಡೆಯೊಂದರಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಅಲ್ಲಿ ಕ್ರೀಡಾಪಟುಗಳು ನಿಯಮಾನುಸಾರ ಪಥಸಂಚಲನ ನಡೆಸದ ಹಿನ್ನೆಲೆಯಲ್ಲಿ ಸಂಘಟಕರನ್ನು ಅಧಿಕಾರಿಗಳ ಮೇಲೆ ಹರಿಹಾಯ್ದಿದ್ದರು. ಆ ಹಿನ್ನೆಲೆಯಲ್ಲಿ ಈ ಪಂದ್ಯಾವಳಿಯನ್ನು ಹಗುರವಾಗಿ ಪರಿಗಣಿಸದೆ ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ಮಾಡಿದರು.

ಶಿಕ್ಷಣ ಸಚಿವ ಎನ್.ಮಹೇಶ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಲು ಒಪ್ಪಿದ್ದಾರೆ. ಶಿಕ್ಷಣ ಸಚಿವರು ಈ ಭಾಗಕ್ಕೆ ಆಗಮಿಸಿದ ವೇಳೆ ನಮ್ಮ ಭಾಗದಲ್ಲಿ ಶೈಕ್ಷಣಿಕವಾಗಿ ಆಗಬೇಕಿರುವ ಕಾರ್ಯಗಳನ್ನು ಅವರಿಂದ ಮಂಜೂರಿಸಿಕೊಳ್ಳಲು ಇಲಾಖೆಯಿಂದ ಸಿದ್ಧತೆ ಮಾಡಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಬಿ. ಅಂಕದ, ಇಲಾಖೆ ಅಧೀಕ್ಷಕ ಪ್ರಕಾಶ ಗೊಂಗಡಿ ಮಾತನಾಡಿ, ಅ.27 ರಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಬಂದಿಳಿಯಲಿದ್ದಾರೆ. 28 ರಂದು ಪಂದ್ಯಾವಳಿ ಉದ್ಘಾಟನೆಗೊಳ್ಳಲಿದೆ. ಹೊನಲು ಬೆಳಕಿನ ಪಂದ್ಯಗಳಿರುವುದರಿಂದ ಶಿಸ್ತುಬದ್ಧವಾಗಿ ಕ್ರೀಡಾಕೂಟ ಸಂಘಟಿಸಲು ಒತ್ತು ನೀಡಲಾಗಿದೆ ಎಂದು ಹೇಳಿದರು.

ಪಂದ್ಯಾವಳಿ ಯಶಸ್ವಿಗೆ ಪ್ರತ್ಯೇಕ ಸಮಿತಿಗಳನ್ನು ರಚಿಸಿ ಸಮಿತಿಗಳ ಮೇಲ್ವಿಚಾರಣೆಗೆ ಓರ್ವ ಕಾಲೇಜಿನ ಪ್ರಾಚಾರ್ಯರನ್ನು ನೇಮಿಸಲು ತೀರ್ವನಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಕಾರ್ಯದರ್ಶಿ ಎಂ.ಎನ್. ಮದರಿ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಶ್ರೀಹರಿಗೋಪಾಲಕೃಷ್ಣ, ಎಚ್.ಎಸ್. ಹೊಸಮನಿ, ಎನ್.ಆರ್. ಉಟಗಿ, ಆರ್.ಎ. ಜಹಾಗೀರದಾರ್, ಎಸ್.ಬಿ.ಪಾಟೀಲ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ. ಚಲವಾದಿ ಇತರರು ಇದ್ದರು.

ಎಸ್.ಎಚ್.ಹಾಲ್ಯಾಳ ಸ್ವಾಗತಿಸಿದರು. ವೀರೇಶ ಗುಡ್ಲಮನಿ ನಿರೂಪಿಸಿದರು. ಬಸು ಗುಡ್ಲಮನಿ ವಂದಿಸಿದರು.

ಕ್ರೀಡಾಂಗಣ ವೀಕ್ಷಣೆ

ಕಾಲೇಜಿನ ವಸತಿ ನಿಲಯದ ಆವರಣದಲ್ಲಿ ಒಟ್ಟು ನಾಲ್ಕು ಕೋರ್ಟ್​ಗಳನ್ನು ನಿರ್ವಿುಸಲಾಗಿದ್ದು, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಉಪ ನಿರ್ದೇಶಕ ಎ.ಬಿ. ಅಂಕದ, ಪ್ರಕಾಶ ಗೊಂಗಡಿ ಹಾಗೂ ಗಣ್ಯರು ವೀಕ್ಷಣೆ ಮಾಡಿದರು.