ಅನುದಾನ ನೀಡಲು ತಾರತಮ್ಯ

ಮುದ್ದೇಬಿಹಾಳ: ಬಿಜೆಪಿ ಶಾಸಕರಿರುವ ಮತಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅಗತ್ಯ ಅನುದಾನ ಕೊಡದೆ ಸಮ್ಮಿಶ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆರೋಪಿಸಿದರು.

ಪಟ್ಟಣಕ್ಕಾಗಿ ನಿರಂತರ ಕುಡಿವ ನೀರಿನ ಯೋಜನೆಯ ಪ್ರಸ್ತಾವನೆ ಸಲ್ಲಿಸಿದ್ದರೂ ರಾಜ್ಯ ಸರ್ಕಾರ ಅದಕ್ಕೆ ಮಂಜೂರಾತಿ ನೀಡುತ್ತಿಲ್ಲ. ಕೇಳಿದರೆ ಹಣಕಾಸಿನ ಅಗತ್ಯತೆ ಅನುಸಾರವಾಗಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಒಳಚರಂಡಿ, ರಸ್ತೆ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸೂಚಿಸಿದ್ದೇನೆ ಎಂದು ಪಟ್ಟಣದ ತಮ್ಮ ನಿವಾಸದಲ್ಲಿ ಶನಿವಾರ ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆ ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿ ಸಮಾರೋಪದ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರದಿಂದ ಈಗಾಗಲೇ 250 ಮನೆಗಳು ಬಂದಿದ್ದು ಖುದ್ದು ನಾನೇ ಅಧಿಕಾರಿಗಳ ಜತೆಗೆ ಸರ್ವೇ ನಡೆಸಿ ಮನೆಗಳ ಹಂಚಿಕೆಗೆ ಕ್ರಮ ಕೈಗೊಳ್ಳುತ್ತೇನೆ. ಮನೆ ಇಲ್ಲದ ಬಡವರು ಒಳ್ಳೆಯ ಮನೆಯಲ್ಲಿ ವಾಸಿಸಬೇಕು ಎಂಬುದು ನನ್ನ ಕನಸಾಗಿದೆ. ಹಿಂದಿನ ಶಾಸಕರು ಪ್ರಾರಂಭಿಸಿದ್ದ ಯಾವುದೇ ಕೆಲಸವನ್ನೂ ನಾನು ಬಾಕಿ ಉಳಿಸದೆ ಸಹಕಾರ ನೀಡಿದ್ದೇನೆ. ಈ ಕುರಿತು ಯಾರಿಗೂ ತಪ್ಪು ಕಲ್ಪನೆ ಬೇಡ ಎಂದು ಹೇಳಿದರು.

ಸುಭದ್ರ ದೇಶಕ್ಕಾಗಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಬೈಕ್ ರ‌್ಯಾಲಿ ಮಾಡಲಾಗಿದೆ. ದೇಶದ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ನರೇಂದ್ರ ಮೋದಿ ಅವರ ಜತೆಗೆ ಇಡಿ ದೇಶದ ಜನರು ನಿಲ್ಲುತ್ತಾರೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಮುಖಂಡರಾದ ಮಲಕೇಂದ್ರಗೌಡ ಪಾಟೀಲ, ವಾಸುದೇವ ಹೆಬಸೂರ, ವಿಠ್ಠಲ ಮೋಹಿತೆ, ಈಶ್ವರ ಹೂಗಾರ, ಗೋವಿಂದಸಿಂಗ ಗೌಡಗೇರಿ, ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ ಮತ್ತಿತರರು ಇದ್ದರು.

ಮಾ.5 ರಂದು ಸಭೆ
ಮುದ್ದೇಬಿಹಾಳ ದಾಸೋಹ ನಿಲಯದಲ್ಲಿ ಮಾ.5 ರಂದು ಸಂಜೆ 4 ಗಂಟೆಗೆ ಸಭೆ ಕರೆಯಲಾಗಿದೆ. ಮುದ್ದೇಬಿಹಾಳ ಮತಕ್ಷೇತ್ರದ ವ್ಯಾಪ್ತಿಯ ಪ್ರತಿ ಬೂತ್‌ನಿಂದ ಕನಿಷ್ಠ 10 ಕಾರ್ಯಕರ್ತರು, ಮುಖಂಡರು ಪಾಲ್ಗೊಳ್ಳಬೇಕು ಎಂದು ಶಾಸಕ ನಡಹಳ್ಳಿ ಹೇಳಿದರು.