ಹುತಾತ್ಮ ಯೋಧನಿಗೆ ಭಾವಪೂರ್ಣ ವಿದಾಯ

ಮುದ್ದೇಬಿಹಾಳ: ಜಮ್ಮು ಕಾಶ್ಮೀರದ ಪೂಂಚ್ ಸೆಕ್ಟರ್‌ನ ತರಬೇತಿಯಲ್ಲಿ ಗ್ರೆನೇಡ್ ಸ್ಫೋಟದ ವೇಳೆ ಹುತಾತ್ಮರಾದ ಯೋಧ ಶ್ರೀಶೈಲ ಬಳಬಟ್ಟಿ(ತೋಳಮಟ್ಟಿ) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಹಾಗೂ ಸೇನಾ ಗೌರವದೊಂದಿಗೆ ಶುಕ್ರವಾರ ಯೋಧನ ಸ್ವಗ್ರಾಮ ತಾಲೂಕಿನ ಬಳಬಟ್ಟಿ ಗ್ರಾಮದಲ್ಲಿ ಜರುಗಿತು.
ಬಳಬಟ್ಟಿ ಗ್ರಾಮದ ಆರೋಗ್ಯ ಉಪ ಕೇಂದ್ರದ ಮುಂಭಾಗದ ಆವರಣದಲ್ಲಿ ಯೋಧನ ಅಂತ್ಯಸಂಸ್ಕಾರ ಮಾಡಲಾಯಿತು. ಜಮ್ಮು ಕಾಶ್ಮೀರದ ಮದ್ರಾಸ್ 12ನೇ ರೆಜಿಮೆಂಟ್‌ನ ಸೈನಿಕರು ಮೂರು ಸುತ್ತು ಗುಂಡು ಹಾರಿಸಿ ಗೌರವ ವಂದನೆ ಸಲ್ಲಿಸಿದರು. ಪೊಲೀಸ್ ಸಿಬ್ಬಂದಿ ನಾಲ್ಕು ಸುತ್ತು ಕುಶಾಲ ತೋಪು ಹಾರಿಸಿ ಸರ್ಕಾರಿ ಗೌರವ ವಂದನೆ ಸಲ್ಲಿಸಿದರು.
ಕರ್ನಾಟಕ ಎನ್‌ಸಿಸಿ-36 ವಿಭಾಗದ ಕರ್ನಲ್ ಎ.ಎಂ. ವೆಲಂಕರ್, ಮದ್ರಾಸ್ ರೆಜಿಮೆಂಟ್‌ನ ಸುಬೇದಾರ ಆರ್. ಗುಡಗಿ,ದೇವರಾಜ ಕೋಟೇಕಾರ, ಬೆಳಗಾವಿಯ ಜೆ.ಎಲ್. ಮಿಗ್ ಕಮಾಂಡರ್‌ಗಳು ಹಾಗೂ ಜಿಲ್ಲಾಡಳಿತದ ಪರವಾಗಿ ಉಪ ವಿಭಾಗಾಧಿಕಾರಿ ರುದ್ರೇಶ್, ತಾಲೂಕಾಡಳಿತದಿಂದ ತಹಸೀಲ್ದಾರ್ ವಿನಯಕುಮಾರ ಪಾಟೀಲ, ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸ್‌ಐ ಸಂಜಯ ತಿಪ್ಪರೆಡ್ಡಿ ಅಗಲಿದ ಯೋಧನ ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸಿ, ವಂದಿಸಿದರು.
ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಮುಖಂಡ ಮಲಕೇಂದ್ರಗೌಡ ಪಾಟೀಲ, ಕಾಂಗ್ರೆಸ್ ಮುಖಂಡ ಸಂತೋಷ ಚವಾಣ್, ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಎಂ.ಕೆ. ಮುತ್ತಣ್ಣವರ, ಬಾಪುಗೌಡ ಪೀರಾಪುರ, ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ ಹಳೇಮನಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಸ್.ಆರ್. ಕುಲಕರ್ಣಿ ಹಾಗೂ ಪದಾಧಿಕಾರಿಗಳು ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

Leave a Reply

Your email address will not be published. Required fields are marked *