ಶಿಕ್ಷಕಿ ಹುನಗುಂದ ಅವರ ಧರಣಿ ಅಂತ್ಯ

ಮುದ್ದೇಬಿಹಾಳ: ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರಿಗೆ ಮೂರು ದಿನಗಳಿಂದ ಶಿಕ್ಷಕಿ ಭೂದೇವಿ ಹುನಗುಂದ ನಡೆಸಿದ್ದ ಧರಣಿಯನ್ನು ಶಿಕ್ಷಣಾಧಿಕಾರಿ ಹಾಗೂ ಸಂಘಟನೆ ಪ್ರಮುಖರ ಮನವಿಗೆ ಸ್ಪಂದಿಸಿ ಬುಧವಾರ ಅಂತ್ಯಗೊಳಿಸಿದರು.

ಢವಳಗಿ ಗ್ರಾಮದ ಖಾಸಗಿ ಪ್ರಾಥಮಿಕ ಶಾಲೆಯೊಂದರಲ್ಲಿ ಸೇವೆ ಸಲ್ಲಿಸಿದ್ದರೂ ಸೇವೆಗೆ ನೇಮಕ ಮಾಡಿಕೊಳ್ಳದೆ ಆ ಜಾಗಕ್ಕೆ ಮತ್ತೊಬ್ಬರನ್ನು ನೇಮಕ ಮಾಡಿಕೊಂಡು ಅನುದಾನಕ್ಕಾಗಿ ಇಲಾಖೆಗೆ ಅನುಮೋದನೆಗೆಂದು ಕಳಿಸಲಾಗಿದೆ. ಈ ಹಿನ್ನೆಲೆ ನನಗಾದ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿ ಸತ್ಯಾಗ್ರಹ ನಡೆಸಿದ್ದರು.

ಧರಣಿನಿರತರನ್ನು ಭೇಟಿ ಮಾಡಿದ ಕರ್ನಾಟಕ ಮುಸ್ಲಿಂ ಕೌನ್ಸಿಲ್ ರಾಜ್ಯ ಯುವ ಕಾರ್ಯದರ್ಶಿ ಕೆ.ಎಂ. ರಿಸಾಲ್ದಾರ್, ಅಂಗವಿಕಲ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಕೆ. ಘಾಟಿ, ವಕೀಲ ಎಸ್.ಆರ್. ಜೋಗಿ, ಸಾಹಿತಿ ಶಿವಪುತ್ರ ಅಜಮನಿ, ನಿಮಗೆ ಢವಳಗಿಯ ಶಾಲೆಯೊಂದರಿಂದ ಅನ್ಯಾಯವಾಗಿದೆ. ಬಿಇಒ ಕಚೇರಿ ಮುಂದೆ ಎಷ್ಟು ದಿನ ಕೂತರೂ ನ್ಯಾಯ ದೊರೆಯುವುದಿಲ್ಲ. ಆದರೆ, ಯಾವ ಹಂತದಲ್ಲಿ ಶಾಲೆಗೆ ಅನುಮೋದನೆ ದೊರೆಯುತ್ತಿದೆ ಎಂಬುವುದನ್ನು ಅರಿತುಕೊಂಡು ಅಲ್ಲಿ ಹೋರಾಟ ನಡೆಸಿದರೆ ನಿಮಗೆ ನ್ಯಾಯ ಸಿಗುತ್ತದೆ ಎಂದು ಹೇಳಿದರು.

ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ. ಚಲವಾದಿ, ಶಿಕ್ಷಕಿ ಭೂದೇವಿ ಹುನಗುಂದ ಅವರ ನ್ಯಾಯಯುತವಾಗಿ ದಾಖಲೆಗಳು ಸಿಕ್ಕರೆ ಶಾಲೆ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಹೇಳಿದರು.

ಶಿಕ್ಷಕಿ ಭೂದೇವಿ ಹುನಗುಂದ, ಅವರ ಪುತ್ರ ಚೇತನ ಶಿವಶಿಂಪಿ ಮಾತನಾಡಿ, ಸದ್ಯ ಹೋರಾಟ ಹಿಂಪಡೆಯುತ್ತಿವೆ. ಒಂದು ವೇಳೆ ನಮಗೆ ನ್ಯಾಯ ಸಿಗದಿದ್ದರೆ ಮತ್ತೆ ಹೋರಾಟಕ್ಕಿಳಿಯುತ್ತೇವೆ ಎಂದು ಹೇಳಿದರು.

ಎಳೆನೀರು ಕುಡಿಸುವ ಮೂಲಕ ಧರಣಿ ಅಂತ್ಯಗೊಳಿಸಲಾಯಿತು. ಸರ್ಕಾರಿ ಉರ್ದು ಶಾಲೆ ಎಸ್​ಡಿಎಂಸಿ ಅಧ್ಯಕ್ಷ ಎಲ್.ಎಂ.ನಾಯ್ಕೋಡಿ, ಮುಖಂಡ ಶಾಹೀದ ಪಠಾಣ್, ಅಂಗವಿಕಲರ ಒಕ್ಕೂಟದ ನಾಗೇಶ ಅಮರಾವತಿ, ಪುನೀತ ಹಿಪ್ಪರಗಿ, ರವಿ ಸೋಮನಾಳ ಇದ್ದರು.