ಸರ್ಕಾರ ಸ್ಪಂದಿಸದಿದ್ದರೆ ಬಾರುಕೋಲು ಚಳವಳಿ

ಮುದ್ದೇಬಿಹಾಳ: ತೀವ್ರ ಬರಗಾಲದಿಂದ ಕಂಗೆಟ್ಟಿರುವ ಅವಳಿ ಜಿಲ್ಲೆಗಳ ಕಾಲುವೆಗಳಿಗೆ 2019 ಮಾ.31ರವರೆಗೆ ನೀರು ಹರಿಸದಿದ್ದರೆ ಸರ್ಕಾರದ ವಿರುದ್ಧ ಬಾರುಕೋಲು ಚಳವಳಿ ನಡೆಸುವುದಾಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸರ್ಕಾರಕ್ಕೆ ಎಚ್ಚರಿಸಿದರು.

ಆಲಮಟ್ಟಿ ಜಲಾಶಯಕ್ಕೆ ಅವಳಿ ಜಿಲ್ಲೆಯ ರೈತರು, ಜನರು ಮನೆ, ಜಮೀನು ತ್ಯಾಗ ಮಾಡಿದ್ದರೂ ಅವರಿಗೆ ನೀರು ಕೊಡಲು ಸರ್ಕಾರದಿಂದ ಆಗುತ್ತಿಲ್ಲ ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಮುದ್ದೇಬಿಹಾಳ ತಾಲೂಕಿನ ಕುಂಟೋಜಿ, ಮೂಕಿಹಾಳ, ಕವಡಿಮಟ್ಟಿ, ಅಡವಿ ಸೋಮನಾಳ, ಹಡಲಗೇರಿ ಹಾಗೂ ಹಿರೇಮುರಾಳ ಗ್ರಾಪಂ ವ್ಯಾಪ್ತಿಯ ಅಂದಾಜು 40 ಹಳ್ಳಿಗಳಿಗೆ ಮುಖ್ಯ ಕಾಲುವೆ, ಉಪ ಕಾಲುವೆ ಮತ್ತು ಹೊಲಗಾಲುವೆಗಳನ್ನು ನಿರ್ವಿುಸಲಾಗಿದೆ. ಈ ಪ್ರದೇಶಕ್ಕೆ ನೀರು ಹರಿಸದೇ ಸಾವಿರಾರು ಕೋಟಿ ರೂ. ಖರ್ಚು ಮಾಡಿ ನಿರ್ವಿುಸಿರುವ ಕಾಲುವೆಗಳು ಹಾಳಾಗುವ ಆತಂಕ ಎದುರಾಗಿದೆ ಎಂದು ಹೇಳಿದರು.

ಮೂರನೇ ಹಂತದ ಯೋಜನೆಗಳು ಪ್ರಗತಿಯಲ್ಲಿದ್ದರೂ ನಮಗೆ ಬರಬೇಕಾದ ನ್ಯಾಯಯುತ ನೀರನ್ನು ಸರ್ಕಾರ ಬಿಡುತ್ತಿಲ್ಲ. ಇದು ಸರ್ಕಾರ ರೈತರಿಗೆ ಮಾಡುತ್ತಿರುವ ಮೋಸ ಎಂದು ಆರೋಪಿಸಿದರು.

ಬರಗಾಲದಿಂದ ನೊಂದಿರುವ ರೈತರಿಗೆ ನ.14ಕ್ಕೆ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ಹಿಂಗಾರು ಬೆಳೆಯನ್ನು ಕಾಲುವೆ ನೀರನ್ನು ನಂಬಿ ಪಡೆದುಕೊಳ್ಳುವ ಆಶಾಭಾವನೆಯಲ್ಲಿದ್ದ ರೈತರಿಗೆ ಬರಸಿಡಿಲು ಬಡಿದಂತಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಂ.ಎಸ್.ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಮಲಕೇಂದ್ರಗೌಡ ಪಾಟೀಲ, ಶಿವಶಂಕರಗೌಡ ಹಿರೇಗೌಡರ, ಜಿಪಂ ಮಾಜಿ ಸದಸ್ಯ ಹೇಮರಡ್ಡಿ ಮೇಟಿ, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಎಸ್.ಎಚ್. ಲೊಟಗೇರಿ, ಎಂ.ಕೆ. ಗುಡಿಮನಿ, ಜಗದೀಶ ಪಂಪಣ್ಣವರ, ಶರಣು ಬೂದಿಹಾಳಮಠ ಮತ್ತಿತರರು ಇದ್ದರು.

ನ.9, 10ರಂದು ಪಾದಯಾತ್ರೆ: ಮಾ.31ರವರೆಗೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ನ.9 ರಂದು ಮುದ್ದೇಬಿಹಾಳ ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಗೆದ್ದಲಮರಿ, ಚಲಮಿ ತಾಂಡಾ, ಹುಲ್ಲೂರ ತಾಂಡಾ, ಹುಲ್ಲೂರ, ಕಾಳಗಿ, ಬಳಬಟ್ಟಿ, ವಡವಡಗಿ, ಮಸೂತಿ, ಯಲ್ಲಮ್ಮನ ಬೂದಿಹಾಳ, ಕಾಶಿನಕುಂಟಿ, ಯಲಗೂರೇಶ್ವರ ದೇವಸ್ಥಾನದಿಂದ ಆಲಮಟ್ಟಿಯ ಕೆಬಿಜೆಎನ್​ಎಲ್ ಮುಖ್ಯ ಇಂಜಿನಿಯರ್ ಕಚೇರಿವರೆಗೆ ರೈತರೊಂದಿಗೆ ಪಾದಯಾತ್ರೆ ನಡೆಸಿ ರೈತರಿಗೆ ಅಗತ್ಯವಾಗಿರುವ ನೀರು ಬಿಡುವಂತೆ ಸಾರ್ವಜನಿಕ ಸಭೆ ನಡೆಸುವುದಾಗಿ ಹೇಳಿದರು.