ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದಲ್ಲಿ ಗುರುವಾರ ನಾಗಂಡ ತಂಡದ ವಿರುದ್ಧ ೫-೦ ಗೋಲುಗಳ ಅಂತರದಲ್ಲಿ ಕುಪ್ಪಂಡ(ಕೈಕೇರಿ) ತಂಡ ಭರ್ಜರಿ ಜಯ ಸಾಧಿಸಿತು.

ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ ೧ರಲ್ಲಿ ಕುಪ್ಪಂಡ(ಕೈಕೇರಿ) ಮತ್ತು ನಾಗಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಕುಪ್ಪಂಡ ತಂಡ ಗೆಲುವು ದಾಖಲಿಸಿತು. ಕುಪ್ಪಂಡ ಪರ ಸೋಮಯ್ಯ ೨, ನಾಚಪ್ಪ, ಚಂಗಪ್ಪ ಹಾಗೂ ದ್ಯಾನ್ ತಲಾ ೧ ಗೋಲು ದಾಖಲಿಸಿದರು.
ಮತ್ರಂಡ ಮತ್ತು ಅಮ್ಮಂಡ ನಡುವಿನ ಪಂದ್ಯದಲ್ಲಿ ೨ ತಂಡಗಳು ನಿಗದಿತ ಸಮಯದಲ್ಲಿ ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೪-೨ ಗೋಲುಗಳ ಅಂತರದಲ್ಲಿ ಮತ್ರಂಡ ಜಯ ಸಾಧಿಸಿತು. ಅನ್ನಡಿಯಂಡ ಮತ್ತು ಪರದಂಡ ನಡುವಿನ ಪಂದ್ಯದಲ್ಲಿ ೬-೨ ಗೋಲುಗಳ ಅಂತದಲ್ಲಿ ಪರದಂಡ ಜಯ ಸಾಧಿಸಿತು. ಪರದಂಡ ಪರ ಕುಶಾಲಪ್ಪ ಹಾಗೂ ಅಯ್ಯಪ್ಪ ತಲಾ ೨, ಉತ್ತಪ್ಪ ಹಾಗೂ ಪೂವಣ್ಣ ತಲಾ ೧ ಗೋಲು ದಾಖಲಿಸಿದರು. ಅನ್ನಡಿಯಂಡ ಪರ ಪ್ರಕ್ಷಿತ್ ಪೊನ್ನಪ್ಪ ಹಾಗೂ ನವೀನ್ ನಾಚಪ್ಪ ತಲಾ ೧ ಗೋಲು ದಾಖಲಿಸಿದರು.
ಬೊಳ್ಳೇರ ಮತ್ತು ಮುಕ್ಕಾಟಿರ(ಬೋಂದ) ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಮುಕ್ಕಾಟಿರ ಗೆಲುವು ಸಾಧಿಸಿತು. ಮುಕ್ಕಾಟಿರ ಪರ ವಸಂತ್ ೨, ಕರುಂಬಯ್ಯ ಹಾಗೂ ನಿಶಾಂತ್ ತಿಮ್ಮಯ್ಯ ತಲಾ ೧ ಗೋಲು ದಾಖಲಿಸಿದರು. ಪಾಡೆಯಂಡ ಮತ್ತು ಐನಂಡ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಐನಂಡ ತಂಡ ಗೆಲುವು ದಾಖಲಿಸಿತು. ಐನಂಡ ಪರ ನಿರನ್ ಕುಶಾಲಪ್ಪ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ಆಕಾಶ್ ಪೂವಣ್ಣ ಹಾಗೂ ನ್ವಿನ್ ನಾಚಪ್ಪ ತಲಾ ೧ ಗೋಲು ಬಾರಿಸಿದರು.
ಮೈದಾನ ೨ರಲ್ಲಿ ನೆಲ್ಲಮಕ್ಕಡ ಮತ್ತು ಮುಕ್ಕಾಟಿರ(ಕಡಗದಾಳು) ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ನೆಲ್ಲಮಕ್ಕಡ ತಂಡ ಜಯ ಸಾಧಿಸಿತು. ನೆಲ್ಲಮಕ್ಕಡ ಪರ ಸಚಿನ್ ೨, ವೃಕ್ಷಿತ್ ಸೋಮಯ್ಯ, ರೋಹನ್ ಬೋಪಣ್ಣ ಹಾಗೂ ಪ್ರತಿಕ್ ಪೂವಣ್ಣ ತಲಾ ೧ ಗೋಲು ದಾಖಲಿಸಿದರು. ಕುಂಡ್ಯೋಳಂಡ ಮತ್ತು ನಾಪಂಡ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ನಾಪಂಡ ತಂಡ ಗೆಲುವು ಸಾಧಿಸಿತು.
ನಾಪಂಡ ಪರ ಸೋನು ಸೋಮಣ್ಣ ಹಾಗೂ ಪ್ರವೀಣ್ ತಲಾ ೧ ಗೋಲು ದಾಖಲಿಸಿದರು. ಕೇಲೇಟಿರ ಮತ್ತು ಕೋಳೆರ ನಡುವೆ ನಡೆದ ಪಂದ್ಯದಲ್ಲಿ ೩-೨ ಗೋಲುಗಳ ಅಂತರದಲ್ಲಿ ಕೋಳೆರ ತಂಡ ಗೆಲುವು ದಾಖಲಿಸಿತು. ಕೋಳೆರ ಪರ ವಿನಯ್ ನಾಣಯ್ಯ, ಅಯ್ಯಪ್ಪ ಹಾಗೂ ಮಿಲನ್ ಮಾಚಯ್ಯ ತಲಾ ೧ ಗೋಲು ದಾಖಲಿಸಿದರು.
ಚೆಕ್ಕೇರ ಮತ್ತು ಶಾಂತೆಯಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ನಿಗದಿತ ಅವಧಿಯಲ್ಲಿ ತಲಾ ೧ ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೩-೧ ಗೋಲುಗಳ ಅಂತರದಲ್ಲಿ ಚೆಕ್ಕೇರ ಜಯ ಸಾಧಿಸಿತು. ಚೆಕ್ಕೇರ ಪರ ವರುಣ್ ಮಾದಪ್ಪ ೧, ಶಾಂತೆಯಂಡ ಪರ ಬಿಪಿನ್ ಬೋಪಯ್ಯ ೧ ಗೋಲು ದಾಖಲಿಸಿದರು. ಕೂತಂಡ ಮತ್ತು ಅಲ್ಲಪಂಡ ನಡುವಿನ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ಕೂತಂಡ ತಂಡ ಗೆಲುವು ದಾಖಲಿಸಿತು. ಕೂತಂಡ ಪರ ಸಂತೋಷ್ ಮೇದಪ್ಪ ೨ ಹಾಗೂ ಬೋಪಣ್ಣ ೧ ಗೋಲು ದಾಖಲಿಸಿದರು. ಕುಲ್ಲಚಂಡ ಮತ್ತು ಪೆಮ್ಮಂಡ ನಡುವಿನ ಪಂದ್ಯದಲ್ಲಿ ೩-೦ ಗೋಲುಗಳ ಅಂಗತರದಲ್ಲಿ ಪೆಮ್ಮಂಡ ತಂಡ ಜಯ ಸಾಧಿಸಿತು. ಪೆಮ್ಮಂಡ ಪರ ಲವಿನ್ ಅಯ್ಯಪ್ಪ, ಸುಹಾಸ್ ಸೋಮಣ್ಣ ಹಾಗೂ ಸೋಮಣ್ಣ ಪಿ.ಎ.ತಲಾ ೧ ಗೋಲು ದಾಖಲಿಸಿದರು.
ಏ.೨೧ ರಿಂದ ಮಹಿಳೆಯರ ಹಾಕಿ
ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ಬೆಳ್ಳಿಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಮಹಿಳಾ ತಂಡಗಳ ನಡುವೆ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಏ.೨೧ ರಿಂದ ಮಹಿಳೆಯರ ೫ಎ ಸೈಡ್ ಹಾಕಿ ಉತ್ಸವ ಆರಂಭಗೊಳ್ಳಲಿದೆ ಎಂದು ಮುದ್ದಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ತಿಳಿಸಿದ್ದಾರೆ.
ಮುದ್ದಂಡ ಹಾಕಿ ಉತ್ಸವದ ಮೈದಾನದಲ್ಲಿ ಬೆಳಿಗ್ಗೆ ೯ ಗಂಟೆಗೆ ಪಂದ್ಯಾವಳಿ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ವಿಜೇತ ಹಿರಿಯ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಹಾಗೂ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಆಟಗಾರ್ತಿ ಮಂಡೇಪಂಡ ಪುಷ್ಪ ಕುಟ್ಟಣ್ಣ ಪಾಲ್ಗೊಳ್ಳಲಿದ್ದಾರೆ. ೫೬ ಮಹಿಳಾ ತಂಡಗಳ ನಡುವೆ ರೋಚಕ ಪಂದ್ಯಗಳು ನಡೆಯಲಿವೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಇಂದಿನ ಪಂದ್ಯಾಟ
ಮೈದಾನ ೧
ಬೆಳಿಗ್ಗೆ ೯ ಗಂಟೆಗೆ ಚೋಯಮಾಡಂಡ ಮತ್ತು ಕೋಟೇರ, ೧೦ ಗಂಟೆಗೆ ಕುಮ್ಮಂಡ ಮತ್ತು ಪುದಿಯೊಕ್ಕಡ, ೧೧ ಗಂಟೆಗೆ ಮುಕ್ಕಾಟಿರ (ಬೋಂದ) ಮತ್ತು ಚಂಗುಲಂಡ, ಮಧ್ಯಾಹ್ನ ೧ ಗಂಟೆಗೆ ಅಟ್ರಂಗಡ ಮತ್ತು ಮಳವಂಡ, ೨ ಗಂಟೆಗೆ ಕಾಯಪಂಡ ಮತ್ತು ಮೇಕೇರಿರ, ೩ ಗಂಟೆಗೆ ನಂಬುಡುಮಾಡ ಮತ್ತು ಅಂಜಪರವಂಡ ಕುಟುಂಬಗಳ ನಡುವೆ ಸೆಣಸಾಟ ನಡೆಯಲಿದೆ.
ಮೈದಾನ ೨
ಬೆಳಿಗ್ಗೆ ೨ ಗಂಟೆಗೆ ಅಮ್ಮಣಿಚಂಡ ಮತ್ತು ಅಜ್ಜಮಾಡ, ೧೦ ಗಂಟೆಗೆ ಮೇರಿಯಂಡ ಮತ್ತು ಬೋವ್ವೆರಿಯಂಡ, ೧೧ ಗಂಟೆಗೆ ನೆರವಂಡ ಮತ್ತು ಚೆರುಮಂದಂಡ, ಮಧ್ಯಾಹ್ನ ೧ ಗಂಟೆಗೆ ಮುರುವಂಡ ಮತ್ತು ಮಂಡೇಪಂಡ, ೨ ಗಂಟೆಗೆ ಪುಲ್ಲಂಗಡ ಮತ್ತು ಸಣ್ಣುವಂಡ, ೩ ಗಂಟೆಗೆ ಸೋಮೆಯಂಡ ಮತ್ತು ಕಲಿಯಂಡ ಕುಟುಂಬಗಳ ನಡುವೆ ಪೈಪೋಟಿ ನಡೆಯಲಿದೆ.