ಶ್ರೀಶೈಲ ಪಾದಯಾತ್ರಿಗಳ ಜತೆ ತೆರಳಿ ಗುಜರಾತ್​ ತಲುಪಿದ್ದ ಮೀನಾಕ್ಷಿ ವಾಪಸ್ ಮನೆಗೆ

>

ಮುದಗಲ್: ಆಧುನಿಕ ಜೀವನದಲ್ಲಿ ಮಾನವೀಯ ಮೌಲ್ಯ ಕಣ್ಮರೆಯಾಗುತ್ತಿದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ, ದೂರದ ಗುಜರಾತ್‌ನಲ್ಲಿ ಯುವಕ ತೋರಿದ ಕಾಳಜಿಯಿಂದ ಒಂದೂವರೆ ವರ್ಷದ ಹಿಂದೆ ನಾಪತ್ತೆಯಾಗಿದ್ದ  ರಾಯಚೂರು ಜಿಲ್ಲೆಯ ಮಹಿಳೆಯೊಬ್ಬರು ಮತ್ತೆ ಮನೆ ಸೇರಿದ್ದಾರೆ.

ಮುದಗಲ್ ಸಮೀಪದ ಛತ್ತರ ಗ್ರಾಮದ ಮೀನಾಕ್ಷಿ ಶಿವದೇವಯ್ಯ ಹಿರೇಮಠ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಮನೆಯವರಿಗೆ ಹೇಳದೆ ಕೇಳದೆ ಗ್ರಾಮದಿಂದ ಹಾದು ಹೋದ ಶ್ರೀಶೈಲ ಪಾದಯಾತ್ರಿಗಳ ಜತೆ ತೆರಳಿದ್ದರು. ಕುಟುಂಬದವರು ಸಂಬಂಧಿಗಳ ಬಳಿ ವಿಚಾರಿಸಿದರೂ ಪ್ರಯೋಜನವಾಗಿರಲಿಲ್ಲ. ಮೀನಾಕ್ಷಿ ಇಂದು ಇಲ್ಲ ನಾಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಮನೆಯವರು ದಾರಿ ಕಾಯುತ್ತಿದ್ದರು. ಇತ್ತ ಆಂಧ್ರಪ್ರದೇಶದಲ್ಲಿ ರೈಲು ಹತ್ತಿ ಮೀನಾಕ್ಷಿ ಗುಜರಾತ್‌ಗೆ ತೆರಳಿದ್ದರು. ಕನ್ನಡ ಮಾತನಾಡುತ್ತಾ ಭಿಕ್ಷಾಟನೆಯಲ್ಲಿ ತೊಡಗಿದ್ದರು.

ಕೆಲಸದ ನಿಮಿತ್ತ ದಾವಣಗೆರೆಗೆ ಬಂದಿದ್ದ ಗುಜರಾತ್ ಮೂಲದ ಧನರಾಜ್ ಎಂಬ ಯುವಕ ಮೀನಾಕ್ಷಿ ಅವರನ್ನು ಕನ್ನಡದಲ್ಲಿ ಮಾತನಾಡಿಸಿ, ವಿಳಾಸ ಪತ್ತೆ ಹಚ್ಚಿದ್ದಾರೆ. ಸ್ಥಳೀಯ ಮಹಿಳಾ ಸುರಕ್ಷಾ ಸೇತು ಸಂಘಟನೆಯ ಸೋಲಾಂಕಿ ರೀತಾಗೆ ಮಾಹಿತಿ ನೀಡಿದ್ದಾರೆ. ತದ ನಂತರ ಸಂಘಟನೆಯ ಸದಸ್ಯರು ಪೊಲೀಸರ ಸಹಾಯದಿಂದ ಮೀನಾಕ್ಷಿಯನ್ನು ಮನೆಗೆ ಸೇರಿಸಿದ್ದಾರೆ.

ನೆರೆಯ ರಾಜ್ಯದವರ ಸಹಕಾರಕ್ಕೆ ಮೀನಾಕ್ಷಿ ಅವರ ತಾಯಿ ಈರಮ್ಮ ಧನ್ಯವಾದ ಅರ್ಪಿಸಿದ್ದಾರೆ. ಈ ವೇಳೆ ಮುದಗಲ್ ಪಿಎಸೈ ದೊಡ್ಡಪ್ಪ, ಗುಜರಾತ್ ಪೊಲೀಸ್ ಸಿಬ್ಬಂದಿ ನೀಲೇಶ ಕುಮಾರ, ಕೀರ್ತಿಕಾ, ಮಂಜುನಾಥ, ಸಂಘಟನೆಯ ಸೋಲಾಂಕಿ ರೀತಾ, ಧನರಾಜ್ ಇತರರಿದ್ದರು.