ಮುದಗಲ್: ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ ಸಾಕ್ಷರತೆ ಪ್ರಮಾಣ ಶೇ.59.56 ಇದ್ದು. ಅಂದಾಜು ಶೇ.16 ರಷ್ಟು ಕುಸಿದಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಬಿ.ಬಡಿಗೇರ್ ಹೇಳಿದರು.
ಸಮೀಪದ ಕನ್ನಾಪೂರಹಟ್ಟಿಯ ಪಿ.ಎಂ.ಶ್ರೀ ಜವಾಹರ ನವೋದಯ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ 2247 ಕ್ಕೂ ಹೆಚ್ಚು ಸರ್ಕಾರಿ ಮತ್ತು ಅರೆ ಸರ್ಕಾರಿ ಶಾಲೆಗಳಿದ್ದು, 4,06,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣದ ಮೂಲಕ ಸಂಸ್ಕಾರ ಕಲಿಸಬೇಕು. ಗುಣಮಟ್ಟದ ಶಿಕ್ಷಣದ ಮೂಲಕ ಜಿಲ್ಲೆಯ ಸಾಕ್ಷರತೆ ಪ್ರಮಾಣ ಇಮ್ಮಡಿಗೊಳಿಸುವ ಪ್ರಯತ್ನ ನಡೆದಿದೆ. ಮಕ್ಕಳು, ಪಾಲಕರು ಸಹಕರಿಸುವಂತೆ ಕೋರಿದರು.
ಲಿಂಗಸುಗೂರು ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ ಮಾತನಾಡಿ, ವಸತಿ ಶಾಲೆಗಳಲ್ಲಿ ಅಭ್ಯಾಸ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು. ರಜತ ಮಹೋತ್ಸವದ ನಿಮಿತ್ತ ವಿದ್ಯಾರ್ಥಿಗಳು ಮೈತ್ರಿ ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಪ್ರಾಚಾರ್ಯ ಮುನೇಂದ್ರಕುಮಾರ್, ನಿವೃತ್ತ ಪ್ರಾಚಾರ್ಯ ಕನ್ನಯ್ಯ, ಭಾರತ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ, ಯಾದಗಿರಿ ಜೆಎನ್‌ವಿಯ ಪ್ರಾಚಾರ್ಯ ಚಂದ್ರಬಾಬು, ಉಪನ್ಯಾಸಕರಾದ ಶ್ರೀಧರ ಗುಡಿ ರಮೇಶ ಮಟ್ಟಣ್ಣನವರ್, ಪಿಟಿಸಿ ಸದಸ್ಯರಾದ ದೇವಪ್ಪ ನಾಯಕ್, ಮೇಘಾ ಕುಮಾರಿ, ಶರಣಮ್ಮ, ಜಯಲಕ್ಷ್ಮೀ ಸಜ್ಜನ್, ನಾರಾಯಣಪ್ಪ ಮಾಡಶಿರವಾರ, ಅನ್ನಪೂರ್ಣ ಇತರರಿದ್ದರು.