
ಮುದಗಲ್: ಸಾರ್ವಜನಿಕರು ಸಿಸಿ ರಸ್ತೆ ಕಾಮಗಾರಿಗೆ ಸಹಕಾರ ನೀಡಿದರೆ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಸಮೀಪದ ಚಿಕ್ಕಲೆಕ್ಕಿಹಾಳ ಹಾಗೂ ಹಿರೇಲೆಕ್ಕಿಹಾಳ ಗ್ರಾಮಗಳಲ್ಲಿ 2024-25ನೇ ಸಾಲಿನ ಕೆಕೆಆರ್‌ಡಿಬಿಯಿಂದ ತಲಾ 50 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಅಧಿಕಾರಿಗಳು, ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.
ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ಭವನ ನಿರ್ಮಿಸಲು 15 ಲಕ್ಷ ರೂ. ಅನುದಾನ ನೀಡಲಾಗುವುದು. ತಾಲೂಕಿನ 80 ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ತಲಾ 50 ಲಕ್ಷ ರೂ. ನೀಡಿದ್ದು, ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ತಾಂತ್ರಿಕ ತೊಂದರೆಯಿಂದ ಬೀದಿದೀಪ ಅಳವಡಿಕೆ ನನೆಗುದಿಗೆ ಬಿದ್ದಿದ್ದು, ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಮಾತನಾಡಿದರು. ಭೂ ಸೇನಾ ನಿಗಮದ ಎಇಇ ಹನಮಂತಪ್ಪ, ಮುಖಂಡರಾದ ವೆಂಕನಗೌಡ ಐದನಾಳ, ರಾಜು ಚವ್ಹಾಣ, ಅಮರಪ್ಪ ಚಾಗಬಾವಿ, ಶಂಕ್ರಪ್ಪ ಮಾಕಾಪುರ, ಹೊಳಿಯಪ್ಪ ಗೋಡಿ, ರಾಘವೇಂದ್ರ ಇತರರಿದ್ದರು.