ಆಶ್ರಯ ಮನೆಗೆ ಲಂಚ ಕೇಳಿದ ಗ್ರಾಪಂ ಸದಸ್ಯನಿಗೆ ಮಹಿಳೆಯಿಂದ ತರಾಟೆ

>

ಮುದಗಲ್ : ಆಶ್ರಯ ಮನೆ ಮಂಜೂರಾತಿಗೆ ಲಂಚದ ಬೇಡಿಕೆ ಇಟ್ಟಿದ್ದ ಗ್ರಾಪಂ ಸದಸ್ಯಗೆ ಮಹಿಳೆ ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ.

ಬಯ್ಯಪುರ ಗ್ರಾಪಂಯ ಬೋಗಾಪುರದ ಸದಸ್ಯ ಅಂಬ್ರೇಶ ಬೊಮ್ಮನಾಳದ ಮಹಿಳಾ ಫಲಾನುಭವಿಗೆ ಹಣದ ಬೇಡಿಕೆ ಇಟ್ಟಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಸರ್ಕಾರದಿಂದ ಬಂದ ಆಶ್ರಯ ಮನೆಗೆ ನಿನಗೇಕೆ ಹಣ ನೀಡಬೇಕು? ನೀನು ನಮಗೆ ಸಾಲ ನೀಡಿರುವೆಯಾ ಅಥವಾ ಸರ್ಕಾರಕ್ಕೆ ನೀನು ಸಾಲ ಕಟ್ಟುತ್ತಿಯಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಆಶ್ಲೀಲವಾಗಿ ಬೈದಿದ್ದಾರೆ.

ಈ ಘಟನೆಯನ್ನು ಸ್ಥಳೀಯರು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದು, ವೈರಲ್ ಆಗಿದೆ. ಗ್ರಾಪಂ ಸದಸ್ಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಗ್ರಾಪಂ ಸದಸ್ಯಗೆ ಪ್ರಶ್ನಿಸಿದರೆ, ಮಹಿಳಾ ಫಲಾನುಭವಿಗೆ ಮನೆ ಮಂಜೂರು ಆಗಿರಲಿಲ್ಲ. ನಾನೆ ಅವರಿಗೆ ಮನೆ ಮಂಜೂರು ಮಾಡಿಸಿದ್ದೇನೆ. ಅದಕ್ಕೆ ಮಾತಿನಂತೆ ನನಗೆ ಹಣ ಕೊಡಬೇಕು ಎಂದು ಗ್ರಾಪಂ ಸದಸ್ಯ ವಾದಿಸುತ್ತಿದ್ದಾನೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಪ್ರತಿ ಹಳ್ಳಿಯಲ್ಲಿ ಮನೆಗಳ ಮಂಜೂರಾತಿಗೆ ಗ್ರಾಪಂ ಸದಸ್ಯರು, ಅಧಿಕಾರಿಗಳು ಹಣ ಕೇಳುತ್ತಾರೆ. ಬೋಗಾಪುರದ ಮಹಿಳೆಯಂತೆ ಎಲ್ಲರೂ ದಿಟ್ಟತನ ಪ್ರದರ್ಶಿಸಿದರೆ, ಲಂಚದ ಹಾವಳಿ ತಡೆಯಬಹುದು.
| ಶರಣಪ್ಪ ಗುಡಿಹಾಳ ತಾಲೂಕು ಸಂಚಾಲಕರು, ಹೈದರಾಬಾದ್ ಕರ್ನಾಟಕ ವಿಮೋಚನಾ ವೇದಿಕೆ.