ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ತಮ್ಮ ಪತ್ನಿಗೆ ಹಂಚಿಕೆ ಮಾಡಿದ ನಿವೇಶನಗಳ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಲೇ ಇದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿ, ಪಂಚ ಪ್ರಶ್ನೆಗಳನ್ನು ಸಿದ್ದರಾಮಯ್ಯ ಅವರ ಮುಂದಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಸಂದೇಶದ ಜತೆಗೆ ಐದು ಪ್ರಶ್ನೆಗಳನ್ನು ಭಾನುವಾರ ಹಂಚಿಕೊಂಡಿರುವ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯರಿಂದ ಕನ್ನಡಿಗರು ನಿರೀಕ್ಷಿಸಿರುವ ಉತ್ತರಗಳು ಎಂದು ಬರೆದುಕೊಂಡಿದ್ದಾರೆ.
ತವರು ಮನೆಯಿಂದ ತಮ್ಮ ಪತ್ನಿಗೆ ದಾನವಾಗಿ ನೀಡಿದ್ದ ಜಮೀನು ಮುಡಾ ಅತಿಕ್ರಮಿಸಿಕೊಂಡಿತ್ತು. ತಮ್ಮ ಪತ್ನಿ ಅರ್ಜಿ ಸಲ್ಲಿಸಿದ ಬಳಿಕ ಮುಡಾಗೆ ತಪ್ಪಿನ ಅರಿವಾಗಿ ಬದಲೀ ನಿವೇಶನಗಳನ್ನು ಹಂಚಿದೆ ಎಂದೂ ಸಿದ್ದರಾಮಯ್ಯ ಪುನರುಚ್ಚರಿಸುತ್ತಿದ್ದಾರೆ.
ಆದರೆ ಸಿಎಂ ಸಿದ್ದರಾಮಯ್ಯನವರ ಬಾಮೈದ ಬಿ.ಎನ್.ಮಲ್ಲಿಕಾರ್ಜುನಸ್ವಾಮಿ ಅವರು ಆ ಭೂಮಿ ಖರೀದಿಸಿರುವ ಬಗ್ಗೆಯೇ ಸಾಕಷ್ಟು ಅನುಮಾನಗಳಿವೆ ಎಂದು ಆರ್.ಅಶೋಕ್ ಹೇಳಿದ್ದಾರೆ.
ಉತ್ತರ ಕೊಡಿ ಸಿಎಂ
ಸಿಎಂ ಸಿದ್ದರಾಮಯ್ಯನವರೇ, ತಮ್ಮ ಬಾಮೈದ ಮಲ್ಲಿಕಾರ್ಜುನಸ್ವಾಮಿ ಅವರು ದೇವರಾಜರಿಂದ ಸದರಿ ಜಮೀನು ಖರೀದಿಸಿದ್ದಾಗಿ ಹೇಳುತ್ತಾರೆ. ಆದರೆ ಮಲ್ಲಿಕಾರ್ಜುನ ಸ್ವಾಮಿಯವರ ಭೂಮಿ ಖರೀದಿಸಿದಾಗ ದೇವರಾಜ ಹೆಸರಿನಲ್ಲಿ ಋಣಭಾರ ಪ್ರಮಾಣಪತ್ರ (ಎನ್ಕಂಬರೇಟ್ ಸರ್ಟಿಫಿಕೇಟ್) ಇರಲಿಲ್ಲ ಎನ್ನುವುದು ಸತ್ಯವಲ್ಲವೆ ?
1968ರಲ್ಲೇ ದೇವರಾಜ ಅವರು ಆ ಜಮೀನನ್ನು ಮೈಲಾರಯ್ಯ ಮತ್ತು ಕುಟುಂಬದವರಿಗೆ ಮಾರಿದ್ದು, ನಂತರ ನಕಲಿ ದಾಖಲೆ ಸೃಷ್ಟಿಸಿ, ತಮ್ಮ ಬಾಮೈದ ಮಲ್ಲಿಕಾರ್ಜುನ ಅವರಿಗೆ ಮಾರಿದ್ದು ಸತ್ಯವಲ್ಲವೆ ? ಜಮೀನಿನ ಮಾಲೀಕತ್ವದ ಬಗ್ಗೆ ಗೊಂದಲವಿದ್ದರೂ ತಮ್ಮ ಬಾಮೈದ ಜಮೀನು ಖರೀದಿಸಿದ್ದೇಕೆ ?.
ಜಮೀನು ಖರೀದಿಸುವಾಗ ಸ್ಥಳ ಪರಿಶೀಲನೆ ಮಾಡದೆಯೆ ಖರೀದಿ ಮಾಡಿದರಾ ? ಅಥವಾ ಆ ವೇಳೆಗೆ ಅಲ್ಲಿ ಅದಾಗಲೇ ಬಡಾವಣೆ ಅಭಿವೃದ್ಧಿಯಾಗಿತ್ತೆಂದು ಜಮೀನು ನೋಡದೆಯೆ ಖರೀದಿ ಮಾಡಿದರಾ ?.
2003ರಲ್ಲಿ ಮುಡಾ ನಿವೇಶನ ಮಾಡಿ ಕ್ರಯಕ್ಕೆ ಹಂಚಿಕೆ ಮಾಡಿದ ಮೇಲೆ 2005ರಲ್ಲಿ ಅದೇ ಜಾಗವನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ಉದ್ದೇಶಕ್ಕೆ ಪರಿವರ್ತನೆಗೆ ವರದಿ ನೀಡಲು ಹೇಗೆ ಸಾಧ್ಯ ?
2010ರಲ್ಲಿ ಅರಿಶಿನ ಕುಂಕುಮ ರೂಪದಲ್ಲಿ ತಮ್ಮ ಪತ್ನಿ ಪಾರ್ವತಿ ಅವರಿಗೆ ಜಮೀನು ಸಿಕ್ಕಾಗ ಅವರು ಸ್ಥಳಕ್ಕೆ ಭೇಟಿ ನೀಡಿರಲಿಲ್ಲವೆ ?. ಉತ್ತರ ಕೊಡಿ ಸಿಎಂ ಸಿದ್ದರಾಮಯ್ಯನವರೇ ಎಂದು ಆರ್.ಅಶೋಕ್ ಕನ್ನಡಿಗರ ಪರವಾಗಿ ಕೇಳಿದ್ದಾರೆ.