More

    ಲೋ ಕಮಾಂಡ್ ಆದ ಕಾಂಗ್ರೆಸ್ ಹೈಕಮಾಂಡ್

    ಕೋಲಾರ: ರಾಜ್ಯದ ಮುಂಚೂಣಿ ನಾಯಕರಿಂದಲೇ ಕಾಂಗ್ರೆಸ್ ಹೈಕಮಾಂಡ್ ಶಕ್ತಿ ಕಳೆದುಕೊಂಡಿದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಛೇಡಿಸಿದರು.

    ಮಾಲೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡಿದ್ದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಳಂಬ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಮೂರು ಗುಂಪುಗಳಾಗಿವೆ. ಸಿದ್ದರಾಮಯ್ಯ ಎಂ.ಬಿ. ಪಾಟೀಲ್ ಪರ ಲಾಬಿ ಮಾಡುತ್ತಿದ್ದಾರೆ ಎಂದರು.

    ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ, ವಿಸ್ತರಣೆ ವಿಳಂಬವಾಗಲು ಸಕಾರಣವಿದೆ ಎಂದ ಅವರು, ಬಿಜೆಪಿಯಲ್ಲಿ ನನ್ನನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಉಪಸಮರದಲ್ಲಿ ಪಕ್ಷದ ಪರ ಕೆಲಸ ಮಾಡದ ಸಂಸದ ಬಚ್ಚೇಗೌಡ ವಿರುದ್ಧ ವರಿಷ್ಠರು ಸೂಕ್ತ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಮತದಾರರೂ ಭ್ರಷ್ಟರಾಗಿದ್ದಾರೆ

    ಮೊದಲು ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಭ್ರಷ್ಟರಾಗಿದ್ದರು. ಈಗ ಮತದಾರರೂ ಭ್ರಷ್ಟರಾಗಿದ್ದಾರೆ
    ಎಂದು ಎಂಟಿಬಿ ನಾಗರಾಜ್ ಬೇಸರಿಸಿದರು.

    ಉಪಚುನಾವಣೆಯಲ್ಲಿನ ಸೋಲಿನ ಬಗ್ಗೆ ಪ್ರಸ್ತಾಪಿಸಿದ ಅವರು, ರಾಜಕೀಯ ಕಾಡ್ಗಿಚ್ಚಿನ ರೀತಿಯಾಗಿ ಸೇವಾ ಮನೋಭಾವ ಕಡಿಮೆಯಾಗಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದರೂ ಜನ ನನ್ನ ಕೈ ಹಿಡಿಯಲಿಲ್ಲ ಎಂದರು.

    ರಾಜಕೀಯ ಪ್ರಜಾಸೇವೆಯೇ ಹೊರತು ವ್ಯಾಪಾರವಲ್ಲ, ಅಧಿಕಾರ ಕೊಟ್ಟಿರುವುದು ಅಭಿವೃದ್ಧಿ ಮಾಡುವ ಸಲುವಾಗಿ, ವ್ಯಾಪಾರಕ್ಕೆ ಅಲ್ಲ, ದೇಶದ ಸಂಪತ್ತು ಲೂಟಿ ಮಾಡಿದವರು ರಾಜಕಾರಣಿಗಳು ಮತ್ತು ಅಧಿಕಾರಿಗಳು. ಮುಖ್ಯಮಂತ್ರಿ ಅಥವಾ ಪ್ರಧಾನಿ ವೇದಿಕೆ ಮೇಲೆ ಇದ್ದರೂ ನಾನು ಇದೇ ಸತ್ಯವನ್ನೇ ಮಾತನಾಡುತ್ತೇನೆ ಎಂದರು.

    ನಾನು ಕಾಂಗ್ರೆಸ್ ಸಂಸ್ಕೃತಿಯಲ್ಲಿ ಬೆಳೆದವನು. ಈಗತಾನೆ ಬಿಜೆಪಿಗೆ ಸೇರಿದ್ದೇನೆ. ಹೀಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ನನಗೂ ಅಷ್ಟೊಂದು ಅರಿವಿಲ್ಲ. ಮುಂದೆ ಬಿಜೆಪಿಯ ಆಚಾರ ವಿಚಾರಗಳಿಗೆ ಹೊಂದಿಕೊಳ್ಳುತ್ತೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts